ಮೈಸೂರು: ಸನಾತನ ಪದಕ್ಕೆ ಇಂಗ್ಲಿಷ್ನಲ್ಲಿ ಪುರಾತನ ಎಂಬ ಅರ್ಥ ಇದೆ. ಇದಕ್ಕೆ ಸನಾತನ ಎನ್ನುವುದು ಶಾಶ್ವತ ಎಂಬ ವ್ಯಾಖ್ಯಾನ ನೀಡುತ್ತದೆ ಎಂದು ಆದಿಚುಂಚನಗಿರಿಯ ಶ್ರೀನಿರ್ಮಲಾನಂದ ಸ್ವಾಮೀಜಿ ವ್ಯಾಖ್ಯಾನ ಮಾಡಿದ್ದಾರೆ.
ಮೈಸೂರಿನ ಆದಿಚುಂಚನಗಿರಿಯ ಶಾಖಾಮಠದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಇದೇ ತಿಂಗಳ 10 ಮತ್ತು 11ನೇ ತಾರೀಖು, ಮೈಸೂರಿನ ಆದಿಚುಂಚನಗಿರಿ ಶಾಖಾಮಠದ ನೂತನ ಕಟ್ಟಡಗಳು ಲೋಕಾರ್ಪಣೆ ಆಗಲಿದೆ. ಈ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್ ಡಿ.ದೇವೇಗೌಡ ಭಾಗವಹಿಸಲಿದ್ದಾರೆ. ಎರಡನೇ ದಿನ ಸೆಪ್ಟೆಂಬರ್ 11 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ. ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಚ್ ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ನಂತರ ಸನಾತನ ಧರ್ಮದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಹೇಳಿಕೆ ನೀಡಿದರು.
ಸನಾತನ ಎಂದರೆ ಶಾಶ್ವತ ಎಂದರ್ಥ:ಸನಾತನ ಧರ್ಮದ ಕುರಿತು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಮಹಾಭಾರತದ "ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ" ಎಂಬ ಸಂದೇಶವನ್ನು ಉಲ್ಲೇಖಿಸಿ ಮಾತನಾಡಿದ ಶ್ರೀಗಳು, ಸನಾತನ ಪದಕ್ಕೆ ಶಾಶ್ವತ ಎನ್ನುವ ಅರ್ಥವಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಜಾಗೃತವಾಗಿ ಮಾತನಾಡಬೇಕು. ಬಳಸುವ ಪದದ ಮೇಲೆ ನಿಗಾ ಇರಬೇಕು. ಸನಾತನ ಪದಕ್ಕೆ ಇಂಗ್ಲಿಷ್ನಲ್ಲಿ ಪುರಾತನ ಎಂಬ ಅರ್ಥ ಇದೆ. ಸನಾತನ ಎಂಬುವುದಕ್ಕೆ ಶಾಶ್ವತ ಎಂಬ ವ್ಯಾಖ್ಯಾನವು ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ. ಅದೇ ಸನಾತನ. ಈ ಪದ ಮತ್ತೊಂದು ರೀತಿ ಪುರಾತನ ಎಂಬ ಅರ್ಥ ಕೊಡುತ್ತದೆ.
ಅಂದರೆ ಧರ್ಮಗಳ ಉದಯವನ್ನು ನೋಡಿದರೆ, ಮುಸ್ಲಿಂ ಧರ್ಮಕ್ಕೆ 1600 ವರ್ಷಗಳ ಇತಿಹಾಸ ಇದೆ, ಕ್ರಿಶ್ಚಿಯನ್ ಧರ್ಮಕ್ಕೆ 2 ಸಾವಿರ ವರ್ಷಗಳ ಇತಿಹಾಸ ಇದೆ, ಬೌದ್ಧ ಮತ್ತು ಜೈನ ಧರ್ಮಗಳೆರೆಡು 2500 ವರ್ಷಗಳ ಹಿಂದೆ ಶುರುವಾಗಿದ್ದು. ಆನಂತರ ಸಿಖ್ ಮತ್ತು ಯಹೂದಿ ಧರ್ಮಗಳು ಬಂದವು. ಆದರೆ, ಮಹಾಭಾರತದ ಕಾಲದಲ್ಲಿ ಕೃಷ್ಣ ಹಿಂದೂ ಧರ್ಮದ ಬಗ್ಗೆ ಹೇಳಿದ್ದಾನೆ. ಆದ್ದರಿಂದ ಹಿಂದೂ ಧರ್ಮ ಪುರಾತನವಾದುದು ಎಂಬ ಪುರಾವೆಗಳು ಹಿಂದೂ ಧರ್ಮದ ಬಗ್ಗೆ ಉಲ್ಲೇಖವಾಗಿವೆ. ಹಿಂದೂ ಧರ್ಮ ಸನಾತನ ಅಥವಾ ಪುರಾತನ ಎಂಬುದಕ್ಕೆ ಸಾಕ್ಷಿ ಇದೆ. ಪ್ರಪಂಚದಲ್ಲಿ ಎಲ್ಲಾ ವ್ಯಕ್ತಿಗಳು ವಿಭಿನ್ನವಾಗಿರುತ್ತಾರೆ.