ಮೈಸೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಗಣಪತಿ ರೂಪದ ಗಜಪಡೆಗೆ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡಹಬ್ಬ ದಸರಾ ಮಹೋತ್ಸವದ ಭಾಗವಹಿಸಲು ಆಗಮಿಸಿರುವ ಮೊದಲ ಹಂತದ ಅಭಿಮನ್ಯು ನೇತೃತ್ವದ ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ, ಕಾವೇರಿ, ಚೈತ್ರ ಮತ್ತು ಲಕ್ಷ್ಮಿ ಗಜಗಳಿಗೆ ಅರಮನೆ ಮೈದಾನದ ಕೊಡಿ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿ ಸಾಂಪ್ರದಾಯಿಕವಾಗಿ ಅರಣ್ಯ ಇಲಾಖೆಯಿಂದ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಫ್ ಕರಿಕಾಳನ್ ಇಂದು ಗಣೇಶ ಚತುರ್ಥಿ ದಿನ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿದ್ದು, ಎರಡನೇ ಹಂತದ 5 ಆನೆಗಳು ಸೆಪ್ಟೆಂಬರ್ 7 ರಂದು ಅರಮನೆಗೆ ಆಗಮಿಸಲಿವೆ. ಅವುಗಳ ತೂಕ ಹಾಕಿ ಮತ್ತು ಮೊದಲ ಹಂತದ ಗಜಪಡೆಯನ್ನು ಸಹ ತೂಕ ಹಾಕಲಾಗುವುದು. ಅನಂತರ ತಾಲೀಮನ್ನು ಆರಂಭಿಸಲಾಗುವುದು. ಎಲ್ಲ ಆನೆಗಳು ಆರೋಗ್ಯವಾಗಿವೆ. ಈ ಬಾರಿ ಅಭಿಮನ್ಯು ಆನೆ ಜಂಬೂಸವಾರಿ ಹೊರಲಿದೆ ಎಂದು ಮಾಹಿತಿ ನೀಡಿದರು.
ಆನೆಗಳಿಗೆ ನಿರಂತರ ತಾಲೀಮು :ಮೊದಲ ಹಂತದ 9 ಗಜಪಡೆಗೆ ತಾಲೀಮು ಆರಂಭವಾಗಿದ್ದು, ಎರಡನೇ ಹಂತದ ಗಜಪಡೆ ಬಂದ ನಂತರ ಪಾದಪೂಜೆ ಮಾಡಿ ಬರಮಾಡಿಕೊಳ್ಳಲಾಗುವುದು. ನಂತರ ಎಲ್ಲ ಆನೆಗಳನ್ನು ಒಟ್ಟಾಗಿ ತಾಲೀಮಿಗೆ ಕರೆದೊಯಲಾಗುವುದು.