ಮೈಸೂರು: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಪ್ರವಾಸಿಗರನ್ನು ಸೆಳೆಯಲು ಹಲವು ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ ಕೆ ಸವಿತಾ ಹೇಳಿದ್ದಾರೆ. ದಸರಾ ಕಾರ್ಯಕ್ರಮಗಳ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ದಸರಾ ಚಿತ್ರೋತ್ಸವದ ಉಪ ಸಮಿತಿಯ ಕಾರ್ಯಕ್ರಮಗಳು ಹಾಗೂ ದಸರಾ ಸಂಬಂಧ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಸಂಬಂಧ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯುನೆಸ್ಕೋದಿಂದ ಜಿಲ್ಲೆಯ ಸೋಮನಾಥಪುರ ದೇವಾಲಯದ ಅಭಿವೃದ್ಧಿ ಆಗಿದೆ. ದಸರಾ ನಂತರ ಇಲ್ಲಿಯೇ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದೇವೆ. ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹೆಲಿರೈಡ್ನ್ನು ಪರಿಚಯಿಸುತ್ತಿದ್ದೇವೆ. ಜೊತೆಗೆ ಗಾಳಿಪಟ ಉತ್ಸವ, ಬ್ರಾಂಡಿಂಗ್ ಮೈಸೂರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಈ ಮೂಲಕ ಮೈಸೂರಿಗೆ ಪ್ರತ್ಯೇಕ ಲೋಗೋ ಮತ್ತು ಬ್ಲಾಗ್ಗಳನ್ನು ಮಾಡಲಾಗಿದೆ. ಇದನ್ನೂ ಕೂಡ ಬಿಡುಗಡೆ ಮಾಡುತ್ತೇವೆ. ಇದರ ಜೊತೆಗೆ ಲೇಸರ್ ಶೋ, ಸ್ಟ್ರೀಟ್ ಫೆಸ್ಟ್, ಪ್ರವಾಸಿ ಮಿತ್ರರಿಂದ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ದಸರಾ ದರ್ಶನ ಮಾಡಬೇಕೆಂಬ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಜೊತೆಗೆ ಪ್ರವಾಸೋದ್ಯಮ ಮತ್ತು ದಸರಾ ಸಂಬಂಧ ಹೋಟೆಲ್, ಟ್ರಾವೆಲ್ಸ್ ಮಾಲೀಕರು, ಕೈಗಾರಿಕೋದ್ಯಮಿಗಳು ತಮ್ಮ ವೆಬ್ ಸೈಟ್ಗಳಲ್ಲಿ ಮೈಸೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವಂತೆ ಕೇಳಿಕೊಂಡಿದ್ದೇವೆ. ಪ್ರವಾಸಿಗರು ನೇರವಾಗಿ ಹೋಟೆಲ್, ಟ್ರಾವೆಲ್ಸ್ಗಳನ್ನು ಸಂಪರ್ಕಿಸುವುದರಿಂದ ಇವರ ಮೂಲಕ ಮಾಹಿತಿ ನೀಡಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.