ಮೈಸೂರು:ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಇದ್ದರೆ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬುದಕ್ಕೆ ಈ ವಿಶೇಷಚೇತನರು ಹೊಸ ನಿದರ್ಶನ. ಶ್ರವಣದೋಷವುಳ್ಳ 8 ಜನ ವಿಶೇಷಚೇತನರು ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಪ್ರತಿಷ್ಠಿತ ಸಂಸ್ಥೆಯಲ್ಲಿ ಇಂಜಿನಿಯರ್‌ಗಳಾಗಿ ನೇಮಕಗೊಂಡಿದ್ದಾರೆ. ಈ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
ಜೆಎಸ್‌ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‌ನ ಇಸಿ (ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್) ವಿಭಾಗದ ಶ್ರವಣದೋಷವುಳ್ಳ ವಿದ್ಯಾರ್ಥಿಗಳು ಬೆಂಗಳೂರಿನ ಎಂ/ಎಸ್ ರಸ್ಸೆಲ್ ಟೆಕ್‌ಸಿಸ್ (ಏರೋಸ್ಪೇಸ್ ಆ್ಯಂಡ್ ಡಿಫೆನ್ಸ್ ಡಿವಿಷನ್) ಗೆ ಕಿರಿಯ ಅಭಿಯಂತರರಾಗಿ ಆಯ್ಕೆಯಾಗಿದ್ದಾರೆ. ಕಿರಿಯ ಅಭಿಯಂತರರಾಗಿ ಆಯ್ಕೆಯಾಗಿರುವ ಶಶಿಕುಮಾರ್, ಪೂರ್ಣ ಪ್ರಜ್ಞ, ಎ.ಕಾರ್ತಿಕ್, ಕೆ.ಎಸ್.ಗುರುಪ್ರಸಾದ್, ಎಲ್.ಚೇತನ, ಎಂ.ಚೇತನ್ ಮೂರ್ತಿ, ಆರ್.ಭರತ್, ಶೋಯಬ್ ಮಲ್ಲಿಕ್ ಅವರನ್ನು ಪ್ರಾಚಾರ್ಯರಾದ ಬಿ.ಇಳಂಗೋವನ್, ಇಸಿ ವಿಭಾಗದ ಮುಖ್ಯಸ್ಥೆ ಎಂ.ಕೋಮಲ, ಆಂಗ್ಲ ಉಪನ್ಯಾಸಕ ಕೆ.ಕುಶಾಲ್, ಉಪನ್ಯಾಸಕಿ ಎಂ.ಸ್ಮಿತಾ ಅವರು ಅಭಿನಂದಿಸಿದರು.
ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಶಾಲೆಯ ಪ್ರಾಂಶುಪಾಲ ಬಿ.ಇಳಂಗೋವನ್ ಮಾತನಾಡಿ, "ಶಿಕ್ಷಣ ಮತ್ತು ಉದ್ಯೋಗಗಳ ಅವಕಾಶಗಳಿಂದ ವಿಶೇಷಚೇತನರು ತಮ್ಮ ಜೀವನವನ್ನು ಒತ್ತಡದ ಮೂಲಕವೇ ನಿರ್ವಹಿಸಬೇಕಾಗಿರುತ್ತದೆ. ಇವರು ಆರೋಗ್ಯ ಮತ್ತು ಸುರಕ್ಷತೆ, ತಾರತಮ್ಯ, ಶಿಕ್ಷಣದಲ್ಲಿ ಒಳಗೊಳ್ಳುವಿಕೆ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ" ಎಂದು ಹೇಳಿದರು.
"ಸರ್ಕಾರದಿಂದ ಅಗತ್ಯವಾದ ಹಲವು ಯೋಜನೆಗಳಿದ್ದರೂ ಸಹ ವಿಶೇಷಚೇತನರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಅವರಿಗೆ ಕೌಶಲ್ಯದ ಜೊತೆಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡಬೇಕಿದೆ. ವಿಶೇಷಚೇತನರಿಗೆ ಕೆಲವು ವಿಶೇಷ ಶಾಲೆಗಳು ಪ್ರಾಥಮಿಕ ಹಂತದಿಂದ ಪ್ರೌಢಶಾಲೆಯವರೆಗೆ ಮಾತ್ರ ಇದ್ದು, ಸಾಮಾನ್ಯ ವಿದ್ಯಾರ್ಥಿಗಳ ಜೊತೆಗೆ ಸಾಧನೆಗೈಯಲು ಸಾಧ್ಯವಾಗುವುದಿಲ್ಲ. ಪ್ರೌಢಶಾಲೆಯ ನಂತರದ ಶಿಕ್ಷಣದಲ್ಲಿ ಇವರು ಜೀವನ ಕಟ್ಟಿಕೊಳ್ಳುವ ಹಿನ್ನೆಲೆಯಲ್ಲಿ ಜೆಎಸ್ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಡಿಪ್ಲೋಮಾ ಹಂತದಲ್ಲಿ ತಾಂತ್ರಿಕ ಶಿಕ್ಷಣವನ್ನು ನೀಡುತ್ತಿದೆ" ಎಂದರು.