ಮೈಸೂರು:ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವ ಸಮಾಜ ಸೃಷ್ಟಿಯಾಗಿದೆ. ಇದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು. ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗ, ಎನ್‌ಸಿಸಿ ಘಟಕಗಳು ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ನಾಗರಿಕ ಕಾನೂನಿನ ಚೌಕಟ್ಟಿನಲ್ಲಿ ಅಭಿವೃದ್ಧಿ ಹೊಂದಬೇಕೇ ಹೊರತು ಮತ್ತೊಬ್ಬರ ಜೀವನಕ್ಕೆ ಹಾನಿ ಮಾಡಬಾರದು. ಆಡಳಿತದಲ್ಲಿ ಆಗುವ ಅನ್ಯಾಯಕ್ಕೆ ಪರಿಹಾರ ಕೊಡಿಸಲು ಇರುವುದೇ ಲೋಕಾಯುಕ್ತ. ಅನ್ಯಾಯದ ವಿರುದ್ಧ ನಾಗರಿಕರು ಲೋಕಾಯುಕ್ತದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾನೂನು ಸುವ್ಯವಸ್ಥೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗೆ ಮಾತನಾಡಿದ ಅವರು, ಮಾನವೀಯತೆಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ಸಮಾಜದಲ್ಲಿರುವ ಅವ್ಯವಸ್ಥೆಯನ್ನು ಸರಿಪಡಿಸಬಹುದು. ಅಧಿಕಾರಿಗಳಿಗೆ ತತ್ವಪಾಲನೆಯಲ್ಲಿ ಪ್ರಾಮಾಣಿಕತೆ ಇರಬೇಕು. ನಾವು ಮಾಡಿದ ಉತ್ತಮ ಕೆಲಸದಿಂದ ಸಿಗುವ ಆತ್ಮತೃಪ್ತಿಗಿಂತ ದೊಡ್ದದಾದದ್ದು ಬದುಕಿನಲ್ಲಿ ಮತ್ತೇನೂ ಇಲ್ಲ. ಪ್ರತಿಯೊಬ್ಬ ರಾಜಕಾರಣಿಯು ತಾನು ಸಾರ್ವಜನಿಕ ಸೇವಕ ಎಂದು ಭಾವಿಸಿ ಪ್ರಾಮಾಣಿಕವಾಗಿ ಬದ್ಧತೆಯಿಂದ ಸಾಮಾಜಿಕ ಸುಧಾರಣೆ ಮಾಡಿದಾಗ ಮಾತ್ರ ಸರ್ವಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಭ್ರಷ್ಟತೆ ಇಲ್ಲದಿರುವ ಕ್ಷೇತ್ರವೇ ಇಲ್ಲ:ಅಧಿಕ ಸಂಖ್ಯೆಯ ನ್ಯಾಯಾಲಯಗಳ ಜತೆಗೆ ಅಪಾರ ಸಂಖ್ಯೆಯ ಮೊಕದ್ದಮೆಗಳಿಂದಾಗಿ ತೀರ್ಪು ನಿಧಾನವಾಗುತ್ತಿರುವುದು ವಿಪರ್ಯಾಸ. 1973 ರಲ್ಲಿ 500 ಮೊಕದ್ದಮೆಗಳು ಕಂಡು ಬಂದರೆ ಪ್ರಸ್ತುತ 5 ಲಕ್ಷ ಮೊಕದ್ದಮೆಗಳಿವೆ. ಭ್ರಷ್ಟತೆ ಇಲ್ಲದಿರುವ ಯಾವ ಕ್ಷೇತ್ರವೂ ಇಲ್ಲ. ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಪ್ರತಿಯೊಬ್ಬರ ಪ್ರಾಮಾಣಿಕ ಪ್ರಯತ್ನ, ಪರಿಶ್ರಮ ಅಗತ್ಯವಿದೆ ಎಂದು ತಮ್ಮ ಅಭಿಮತ ವ್ಯಕ್ತಪಡಿಸಿದರು.
ದುರಾಸೆಯಿಂದ ಸಾಮಾಜಿಕ ಅಸಮಾನತೆ: ವಿದ್ಯಾರ್ಥಿಗಳು ತಮ್ಮ ಜೀವನ ಪಥದಲ್ಲಿ ಮಾನವೀಯತೆಯ ಅಂಶವನ್ನು ರೂಢಿಸಿಕೊಂಡಾಗ ಮಾತ್ರ ಅವರು ಸತ್ಪ್ರಜೆಯಾಗಲು ಸಾಧ್ಯ. ಮನುಜನಿಗೆ ತೃಪ್ತಿ ಎನ್ನವುದು ಇಲ್ಲದಿದ್ದರೆ ದುರಾಸೆ ಹೆಚ್ಚಾಗುತ್ತದೆ. ದುರಾಸೆಯಿಂದ ಸಾಮಾಜಿಕ ಅಸಮಾನತೆಗೆ ದಾರಿಯಾಗುತ್ತದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮವಾದ ಹಾಗೂ ಮೌಲ್ಯಯುತವಾದ ಬೋಧನೆಯನ್ನು ಬೋಧಿಸುತ್ತಾರೆ. ಅದನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವ ಹೊಣೆಗಾರಿಕೆ ವಿದ್ಯಾರ್ಥಿಗಳಿಗೆ ಇದೆ. ವಿದ್ಯಾರ್ಥಿಗಳು ತಮ್ಮ ಜೀವನ ಪಥದಲ್ಲಿ ತೃಪ್ತಿ ಹಾಗೂ ಮಾನವೀಯತೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ಯುವ ಸಮೂಹಕ್ಕೆ ನ್ಯಾಯಾಂಗದ ಪರಿಕಲ್ಪನೆಯ ಅರಿವು ಇರಬೇಕು. ವಿದ್ಯಾರ್ಥಿಗಳಿಗೆ ಪುಸ್ತಕಗಳ ಓದಿನ ಅರಿವಿನ ಜತೆಗೆ ಸಾಮಾಜಿಕ ವ್ಯವಸ್ಥೆಯ ಪ್ರಜ್ಞೆ ಅತ್ಯಗತ್ಯ. ಆಧುನಿಕತೆಯ ನಾಗಾಲೋಟದಲ್ಲಿ ತೇಲುತ್ತಿರುವ ಇಂದಿನ ವಿದ್ಯಾರ್ಥಿಗಳಿಗೆ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರ ಬದುಕು ಆದರ್ಶವಾಗಬೇಕು ಎಂದು ಸೂಚಿಸಿದರು.
ಇದನ್ನೂ ಓದಿ:ಕೊಪ್ಪಳದ ವಿದ್ಯಾರ್ಥಿನಿಯಿಂದ ಸಿಎಂಗೆ ಅಭಿನಂದನಾ ಪತ್ರ: ಬಾಲಕಿಗೆ ಮರುಪತ್ರ ಬರೆದ ಸಿದ್ದರಾಮಯ್ಯ