ಮೈಸೂರು:ದಕ್ಷಿಣ ಕಾಶಿ ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಶ್ರದ್ಧಾ ಭಕ್ತಿಯಿಂದ ಚಿಕ್ಕಜಾತ್ರಾ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ಇಂದು ಬೆಳಿಗ್ಗೆ 9.30 ರಿಂದ 10:40 ಗಂಟೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಡಾ. ಮಂಜುನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ರಥಕ್ಕೆ ಪೂಜೆ ಸಲ್ಲಿಸಿ ಚಕ್ರಗಳಿಗೆ ಈಡುಗಾಯಿ ಒಡೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ಕೊಟ್ಟರು.
ದೇವಾಲಯದಿಂದ ಪಾರ್ವತಿ ಸಮೇತ ಶ್ರೀ ಶ್ರೀಕಂಠೇಶ್ವರ ಸ್ವಾಮಿ, ಗಣಪತಿ ಮತ್ತು ಚಂಡಿಕೇಶ್ವರ ಹಾಗೂ ಶ್ರೀ ಮನೋನ್ಮಣಿ ಅಮ್ಮನವರ ಉತ್ಸವ ಮೂರ್ತಿಗಳನ್ನು ದೇವಾಲಯದ ಪ್ರಾಂಗಣದಲ್ಲಿರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಬಣ್ಣ ಬಣ್ಣದ ಬಾವುಟ ಹಾಗೂ ಹೂಗಳಿಂದ ಅಲಂಕರಿಸಲಾಗಿದ್ದ ರಥಗಳಲ್ಲಿ ಕ್ರಮವಾಗಿ ಗಣಪತಿ, ಚಂಡಿಕೇಶ್ವರ, ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿ ಮತ್ತು ಮನೋನ್ಮಣಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಮೂರು ರಥಗಳಲ್ಲಿ ಕೂರಿಸಿ ಪಟ್ಟಣದ ರಥ ಬೀದಿಯಲ್ಲಿ ರಥೋತ್ಸವ ನಡೆಸಲಾಯಿತು.