ಮೈಸೂರು :ಗಣ್ಯರ ಮೇಲಿನ ಹಲ್ಲೆ, ಹತ್ಯೆ ತಡೆಯುವ ಸಂಬಂಧ ಎಸ್‌ಐಟಿ ರಚಿಸಬೇಕು. ನನ್ನ ಹತ್ಯೆಗೆ ಯತ್ನಿಸಿದವರು ಯಾರು, ಉದ್ದೇಶ ಏನು ಎಂಬುದನ್ನೇ ಈವರೆಗೂ ತಿಳಿಸಿಲ್ಲ. ಘಟನೆ ನಡೆದು ಒಂದು ವರ್ಷದ ಮೇಲೆ ಎರಡು ತಿಂಗಳಾದ್ರೂ ಬಹಿರಂಗ ಪಡಿಸಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ಹೊರ ಹಾಕಿದರು.
ಗಣ್ಯರ ಮೇಲಿನ ಹಲ್ಲೆ, ಹತ್ಯೆ ತಡೆಯಲು ಎಸ್‌ಐಟಿ ರಚಿಸಬೇಕು : ಶಾಸಕ ತನ್ವೀರ್ ಸೇಠ್ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳ ಮೇಲೆ ನಡೆಯುವ ಹಲ್ಲೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ನನ್ನ ಮೇಲಿನ ಪ್ರಕರಣದ ಆರೋಪಿಗಳೆಲ್ಲರೂ ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಇಂತಹ ಗಂಭೀರ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಗುತ್ತೆ ಅಂದ್ರೆ ಪೊಲೀಸ್ ತನಿಖೆ ಹೇಗಿತ್ತು?. ಯಾವ ಪ್ರಮಾಣದಲ್ಲಿ ಸಾಕ್ಷಿಗಳನ್ನ ಒದಗಿಸಿದ್ದಾರೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಸರ್ಕಾರ ಗನ್ ಮ್ಯಾನ್, ಪೊಲೀಸ್ ಭದ್ರತೆ ಕೊಟ್ಟರೆ ಸಾಲದು. ನಾವು ಎಲ್ಲಾ ಕಡೆ, ಎಲ್ಲಾ ಟೈಂನಲ್ಲೂ ಪೊಲೀಸರನ್ನ ಜೊತೆಗಿಟ್ಟುಕೊಂಡು ಹೋಗೋಕೆ ಆಗಲ್ಲ. ರಾಜಕಾರಣಿಗಳ ಮೇಲೆ ನಡೆಯುವ ಹಲ್ಲೆಯನ್ನ ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಗಣ್ಯರ ಮೇಲಿನ ಹಲ್ಲೆ, ಹತ್ಯೆ ತಡೆಯುವ ಸಂಬಂಧ ಎಸ್‌ಐಟಿ ರಚಿಸಬೇಕು. ಈ ಸಂಬಂಧ ಗೃಹ ಸಚಿವರೊಂದಿಗೂ ಚರ್ಚೆ ನಡೆಸಿದ್ದೇನೆ ಎಂದರು.
ರಾಜಕಾರಣಿಗಳಲ್ಲಿನ ಭಯದ ವಾತಾವರಣ ಹೋಗ್ಬೇಕು : ಕೇವಲ ನಮ್ಮ ಮುಸ್ಲಿಂ ನಾಯಕರಿಗೆ ಅಷ್ಟೇ ಅಲ್ಲ, ತೇಜಸ್ವಿ ಸೂರ್ಯಗೆ ಬೆದರಿಕೆ ಕರೆ ಬಂದಿತ್ತು. ರಾಜಕಾರಣ ಹೊಲಸಾಗಿದೆ, ಇಂತಹ ಸಂದರ್ಭದಲ್ಲಿ ಯುವಕರು ರಾಜಕಾರಣಕ್ಕೆ ಬರಲು ಹಿಂದೇಟು ಹಾಕ್ತಿದ್ದಾರೆ. ಯುವಕರು ರಾಜಕಾರಣಕ್ಕೆ ಬರುವ ವಾತಾವರಣ ನಿರ್ಮಿಸಬೇಕು ಎಂದರು.
ಮೇಯರ್ ಗದ್ದುಗೆ ಮೈತ್ರಿ ಮುಂದುವರಿಯಲಿದೆ :ಮೈಸೂರು ಪಾಲಿಕೆಯಲ್ಲಿ ಮೇಯರ್ ಗದ್ದುಗೆ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುಂದುವರೆಯಲಿದೆ. ನಾನು ಜೆಡಿಎಸ್ ನಾಯಕ ಕುಮಾರಣ್ಣ ಜೊತೆ ಮಾತನಾಡಿದ್ದೇನೆ.
ಶಾಸಕ ಸಾ.ರಾ.ಮಹೇಶ್ ಜವಾಬ್ದಾರಿ ಹೊತ್ತಿದ್ದಾರೆ. ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಮಾತನಾಡಿಲ್ಲ. ಇನ್ನೆರಡು ಮೂರು ದಿನದಲ್ಲಿ ಕುಳಿತು ಚರ್ಚೆ ಮಾಡುತ್ತೇವೆ ಎಂದರು.