ಮೈಸೂರು : ನಿವೃತ್ತ ಪ್ರಾಂಶುಪಾಲರ ಕೊಲೆಗೆ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್ ಭಟ್ 7 ಲಕ್ಷ ರೂ. ಸುಪಾರಿ ಜೊತೆಗೆ ಸಂಸ್ಕೃತ ಪಾಠ ಶಾಲೆಯಲ್ಲಿ ಸುಪಾರಿ ಕಿಲ್ಲರ್ಗೆ ಉದ್ಯೋಗ ನೀಡುವುದಾಗಿ ಮಾತುಕತೆಯಾಗಿತ್ತು ಎಂದು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಡಾ.ಪ್ರಕಾಶ್ ಗೌಡ ತಿಳಿಸಿದರು.
ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಸುಪಾರಿ ಕೊಲೆ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಪ್ರಕಾಶ್ ಗೌಡ, ಕೊಲೆಯಾದ ಪರಶಿವಮೂರ್ತಿ ವಿಶ್ವಚೇತನ ಸಂಸ್ಕೃತ ಪಾಠ ಶಾಲೆಯನ್ನು ನಡೆಸುತ್ತಿದ್ದು, ಇಲ್ಲಿ ವಿಶ್ವನಾಥ್ ಭಟ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ, ಜೊತೆಗೆ ಶಾಲೆಯ ಮೇಲ್ವಿಚಾರಕನಾಗಿಯೂ ಇದ್ದ. ಕೊಲೆಯಾದ ಪ್ರಾಂಶುಪಾಲ ಪರಶಿವಮೂರ್ತಿ ಶಿಕ್ಷಕರಿಗೆ ನೀಡುತ್ತಿದ್ದ ಸಂಬಳದಲ್ಲಿ ಪಾಲು ಬೇಕೆಂದು ಕೇಳುತ್ತಿದ್ದರು, ಜೊತೆಗೆ ಶಿಕ್ಷಕರಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದಿದ್ದ ವಿಶ್ವನಾಥ್ ಭಟ್, ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಕೊಲೆ ಮಾಡಲು ಸಂಚು ರೂಪಿಸಿದ್ದ. ಅದರಂತೆ ಸಿದ್ದರಾಜು ಮತ್ತು ಪರಶಿವ ಎಂಬುವರಿಗೆ ಈ ಕೆಲಸ ವಹಿಸಿದ್ದ. ಅವರು ನಾಗೇಶ್ ಮತ್ತು ನಿರಂಜನ್ ಎಂಬುವರಿಗೆ 7 ಲಕ್ಷ ಸುಪಾರಿ ನೀಡಿದ್ದು, ಅವರಿಬ್ಬರು ಪರಶಿವಮೂರ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.
ವಿಶ್ವಚೇತನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಜಗಳದ ಬಗ್ಗೆ ಒಂದು ವರ್ಷದ ಹಿಂದೆಯೇ ಎನ್.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಶ್ವನಾಥ್ ಭಟ್ ಅವರ ಮಗಳು ಗಾಯಕಿ ಅನನ್ಯ ಭಟ್ ಕಳೆದ 2 ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಿದ್ದು , ಅನನ್ಯ ಭಟ್ಗೂ ಈ ಕೊಲೆಗೂ ಯಾವುದೇ ಸಂಬಂಧವಿಲ್ಲ, ತಂದೆಯಷ್ಟೇ ಪ್ರಕರಣದಲ್ಲಿ ಆರೋಪಿ ಎಂದು ಡಿಸಿಪಿ ಪ್ರಕಾಶ್ ಗೌಡ ಮಾಹಿತಿ ನೀಡಿದರು.