ಕರ್ನಾಟಕ

karnataka

ETV Bharat / state

ಅದ್ದೂರಿಯಾಗಿ ಜರುಗಿದ ನಾಡಹಬ್ಬ ದಸರಾ ಜಂಬೂಸವಾರಿ - ನಾಡಹಬ್ಬ ದಸರಾ ಜಂಬೂಸವಾರಿ

ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆ ಮಾಡುವ ಮುನ್ನ ಚಾಮುಂಡೇಶ್ವರಿ ದೇವಿಗೆ ಅರಮನೆ ಗ್ಯಾಲರಿಯಲ್ಲಿ ಮಹಾರಾಜರು ಬೆಳಗ್ಗೆ ಅರಮನೆಯಲ್ಲಿ ವಿಜಯದಶಮಿ ಆಚರಿಸಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು..

Simple Dasara Jamboo savari
ನಾಡಹಬ್ಬ ದಸರಾ ಜಂಬೂಸವಾರಿ

By

Published : Oct 15, 2021, 8:33 PM IST

ಮೈಸೂರು :ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ನಿಮಿತ್ತ ಇಂದು ಸರಳ ಹಾಗೂ ಸಾಂಪ್ರದಾಯಿಕವಾಗಿ ಅರಮನೆ ಆವರಣದಲ್ಲಿ ಅದ್ದೂರಿಯಾಗಿ ಜಂಬೂಸವಾರಿ ಮೆರವಣಿಗೆ ನಡೆಯಿತು.

ಜಂಬೂಸವಾರಿಗೆ ಸಿಎಂ, ಗಣ್ಯರಿಂದ ಚಾಲನೆ :ಸರಳ ಹಾಗೂ ಸಾಂಪ್ರದಾಯಿಕ ದಸರಾ-2021ಕ್ಕೆ ಅರಮನೆ ಮುಂಭಾಗದ ವೇದಿಕೆಯಲ್ಲಿ 5 ರಿಂದ 5.30ರವರೆಗೆ ಸಲ್ಲುವ ಶುಭಲಗ್ನದಲ್ಲಿ ಜಂಬೂಸವಾರಿಗೆ ಸಿಎಂ ಬಸವರಾಜ ಬೊಮ್ಮಾಯಿ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಚಿವ ಎಸ್.ಟಿ.ಸೋಮಶೇಖರ್, ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ, ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಶುಭ ಮೀನ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿ‌ ಇರುವ‌ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡಿ ಜಂಬೂಸವಾರಿಗೆ ಚಾಲನೆ ನೀಡಿದರು.

ಅದ್ದೂರಿಯಾಗಿ ಜರುಗಿದ ನಾಡಹಬ್ಬ ದಸರಾ ಜಂಬೂಸವಾರಿ

30 ನಿಮಿಷದಲ್ಲೇ ಜಂಬೂಸವಾರಿ ಅಂತ್ಯ :ನಿಗದಿತ ಅವಧಿಗೆ ಮುನ್ನವೇ ನಂದಿ ಧ್ವಜ ಪೂಜೆ‌ ನೆರವೇರಿಸಿದ ಬಳಿಕ ಜಂಬೂಸವಾರಿಗೆ ಚಾಲನೆ‌ ದೊರಕಿತು.‌ ಕೊರೊನಾ ಹಿನ್ನೆಲೆ ಈ ಬಾರಿ ಜಂಬೂಸವಾರಿಯ ಮೆರವಣಿಗೆಯನ್ನು ಅರಮನೆ ಆವರಣಕ್ಕೆ ಮಾತ್ರ ಸೀಮಿತಗೊಳಿಸಲಾಗಿತ್ತು. ಕೇವಲ 30 ನಿಮಿಷದಲ್ಲೇ ಮೆರವಣಿಗೆ ಮುಕ್ತಾಯವಾಯಿತು.

ಅಂಬಾರಿ ಹೊತ್ತು ಹೆಜ್ಜೆ ಹಾಕಿದ ಅಭಿಮನ್ಯು :ಚಾಮುಂಡೇಶ್ವರಿ ತಾಯಿಯ ಮೂರ್ತಿ ಇರುವ ಚಿನ್ನದ ಅಂಬಾರಿಯನ್ನು ಹೊತ್ತು ಕ್ಯಾಪ್ಟನ್​ ಅಭಿಮನ್ಯು ರಾಜ ಗಾಂಭೀರ್ಯದಿಂದ ಜಂಬೂಸವಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದನು. ಅಭಿಮನ್ಯುವಿನ ಎಡಬಲದಲ್ಲಿ ಕಾವೇರಿ ಹಾಗೂ ಚೈತ್ರಾ ಆನೆಗಳು ಸಾಥ್ ನೀಡಿದವು.

ಬಣ್ಣಗಳಿಂದ ಕಂಗೊಳಿಸಿದ ಗಜಪಡೆ

ಕಲಾತಂಡಗಳ ವಿವರ :ಈ ಬಾರಿ ಜಂಬೂಸವಾರಿಯಲ್ಲಿ 13 ಕಲಾತಂಡಗಳು ಹಾಗೂ 6 ಸ್ತಬ್ಧಚಿತ್ರಗಳು ಭಾಗವಹಿಸಲು ಅವಕಾಶ ನೀಡಲಾಗಿತ್ತು. ಮೆರವಣಿಗೆಯಲ್ಲಿ ನಂದಿಧ್ವಜ ಮೊದಲು ಸಾಗಿತು. ಅದರ ಹಿಂದೆ ವೀರಗಾಸೆ, ನಿಶಾನೆ ನಂತರ ನೌಪತ್ ಆನೆಗಳು ಹೊರಟವು. ಬಳಿಕ ನಾದಸ್ವರ ಹಾಗೂ ಸ್ಯಾಕ್ಸೋಫೋನ್ ಕಲಾವಿದರು ಪ್ರದರ್ಶನ ನೀಡುತ್ತಾ ಮುಂದೆ ಹೋದರು. ಅವರ ಹಿಂದೆ ವೀರಗಾಸೆ ಕಲಾವಿದರು ಹೆಜ್ಜೆ ಹಾಕಿದರು.

ಆ ನಂತರ ಸ್ವಾತಂತ್ರ್ಯ ಅಮೃತ ಮಹೋತ್ಸವ ಸ್ತಬ್ಧಚಿತ್ರ, ನಂತರ ಕಂಸಾಳೆ ಕಲಾವಿದರು ಪ್ರದರ್ಶನ ನೀಡುತ್ತಾ ಸಾಗಿದರೆ, ಅದರ ಹಿಂದೆ ಮುಡಾ ಬಹುಮನೆ ಗುಂಪು ವಸತಿ ಸ್ತಬ್ಧಚಿತ್ರ ಸಾಗಿತು. ನಂತರ ಡೊಳ್ಳುಕುಣಿತ ಕಲಾವಿದರು‌ ಸಾಗಿದರೆ, ಅದರ ಹಿಂದೆ ಕೋವಿಡ್ ಸ್ತಬ್ಧ ಚಿತ್ರ, ಬಳಿಕ ನಗಾರಿ, ಪೂಜಾ ಕುಣಿತ ಕಲಾವಿದರು ಪ್ರದರ್ಶನ ನೀಡುತ್ತಾ ಮೆರವಣಿಗೆಯಲ್ಲಿ ‌ಸಾಗಿದರು.

ಇವರ ಹಿಂದೆಯೇ ಪರಿಸರದ ಪ್ರಾಮುಖ್ಯತೆ ಸಾರುವ ಸ್ತಬ್ಧಚಿತ್ರ, ಅದರ ಹಿಂದೆ ಚಿಲಿಪಿಲಿ ಗೊಂಬೆ, ಕೊಂಬು ಕಹಳೆ, ಗಾರುಡಿ ಗೊಂಬೆ ಸಾಗಿತು. ನಂತರದಲ್ಲಿ ಕೃಷಿ ಇಲಾಖೆಯ ಸ್ತಬ್ಧಚಿತ್ರ, ಚೆಂಡೆವಾದನ ಕಲಾವಿದರು ಪ್ರದರ್ಶನ ನೀಡುತ್ತಾ ಸಾಗಿದರೆ, ಆನೆ ಬಂಡಿ ಅವರನ್ನು ಹಿಂಬಾಲಿಸಿತು. ಕೊನೆಯದಾಗಿ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡುತ್ತಾ ಮೆರವಣಿಗೆಯಲ್ಲಿ ಸಾಗಿದರು.

ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಕಲಾತಂಡ

ನಂದಿ ಧ್ವಜ‌ ಪೂಜೆ :ವಿಜಯದಶಮಿಯಂದು ಜಂಬೂಸವಾರಿಗೆ ಮುನ್ನವೇ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಅರಮನೆಯ ಬಲರಾಮ ದ್ವಾರದ ಬಳಿಯಿರುವ ಕೋಟೆ ಆಂಜನೇಯ ಸ್ವಾಮಿ ದೇಗುಲದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲು ಸಂಜೆ 4:36 ರಿಂದ 4:46ರೊಳಗಿನ ಶುಭ ಮೀನ‌ ಲಗ್ನದಲ್ಲಿ ನಂದಿಧ್ವಜ ಪೂಜೆ ನೆರವೇರಿಸಬೇಕಾಗಿತ್ತು.

ಆದರೆ, 4:32ರ ಸುಮಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂಜೆ ಸಲ್ಲಿಸಿದರು. ಮುಖ್ಯಮಂತ್ರಿಗಳಿಗೆ ಸಚಿವ ಎಸ್ ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇತರ ಗಣ್ಯರು ಪೂಜೆಯಲ್ಲಿ ಜೊತೆಯಾದರು.

ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಕಲಾತಂಡ

ಮೆರವಣಿಗೆ ಮೂಲಕ‌ ಅರಮನೆಗೆ ಆಗಮಿಸಿದ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿ :ಜಂಬೂಸವಾರಿಯ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗುವ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿ, ವಿಶೇಷ ಅಲಂಕಾರ ಮಾಡಿ ಚಾಮುಂಡಿ ಬೆಟ್ಟದಿಂದ ಅರಮನೆವರೆಗೆ ಉತ್ಸವದ ಮೂಲಕ ನಾದಸ್ವರ ತಂಡ, ಪೊಲೀಸ್ ಬ್ಯಾಂಡ್, ಭಜನಾ ತಂಡ, ವೇದಘೋಷದೊಂದಿಗೆ ತೆರೆದ ವಾಹನದಲ್ಲಿ ಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಯನ್ನು ಕರೆ ತರಲಾಯಿತು.‌ ‌

ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪನೆ ಮಾಡುವ ಮುನ್ನ ಚಾಮುಂಡೇಶ್ವರಿ ದೇವಿಗೆ ಅರಮನೆ ಗ್ಯಾಲರಿಯಲ್ಲಿ ಮಹಾರಾಜರು ಬೆಳಗ್ಗೆ ಅರಮನೆಯಲ್ಲಿ ವಿಜಯದಶಮಿ ಆಚರಿಸಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.

ಅದ್ದೂರಿಯಾಗಿ ಜರುಗಿದ ನಾಡಹಬ್ಬ ದಸರಾ ಜಂಬೂಸವಾರಿ

ಬಣ್ಣಗಳಿಂದ ಕಂಗೊಳಿಸಿದ ಗಜಪಡೆ :ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಗಜಪಡಗೆ ಚಿತ್ರಕಲಾವಿದರಾದ ನಾಗಲಿಂಗಪ್ಪ ಬಡಿಗೇರಿ, ಅಣ್ಣ ನಾರಾಯಣ ಬಡಿಗೇರಿ, ತಮ್ಮ ಅರುಣ್ ಬಡಿಗೇರಿ, ಮಧು, ರವಿ ಮೊದಲಾದವರು ವಿವಿಧ ಬಣ್ಣಗಳಿಂದ ಅಲಂಕಾರ ಮಾಡಿದ್ದರು.

2004ರಿಂದ ಈ ತಂಡ ನಿರಂತರವಾಗಿ ಗಜಪಡೆಯನ್ನು ಅಲಂಕಾರಿಸುತ್ತಾ ಬರುತ್ತಿದೆ. ಆನೆಗಳ ದೇಹಗಾತ್ರಕ್ಕೆ ಅನುಗುಣವಾಗಿ ಚಿತ್ರ ಬಿಡಿಸುತ್ತಾರೆ. ಮುಖದ ಮಧ್ಯದಲ್ಲಿ ಗಂಡಭೇರುಂಡ, ಹಣೆ ಭಾಗಕ್ಕೆ ನಾಮ, ಕಿವಿಗೆ ಶಂಖ ಮತ್ತು ಚಕ್ರ, ಸೊಂಡಲಿಗೆ ಹೂ ಬಳಿಗೆ ಹಾರುವ ಪಕ್ಷಿ, ದಂತದ ಮೇಲ್ಭಾಗ, ನಾಲ್ಕು ಕಾಲುಗಳು ಮತ್ತು ಬಾಲ ಸೇರಿದಂತೆ ಅವುಗಳ ಅಕ್ಕಪಕ್ಕದಲ್ಲಿ ವಿವಿಧ ಚಿತ್ತಾರಗಳನ್ನು ಬಿಡಿಸುತ್ತಾರೆ.

ಗಜಪಡೆಗೆ ಅಲಂಕಾರ ಮಾಡುವ ಕೆಲಸ ಜಂಬೂಸವಾರಿಯ ದಿನ ಬೆಳಗಿನ ಜಾವ 3 ಗಂಟೆಗೆ ಆರಂಭವಾಗುತ್ತದೆ. ಬೆಳಗ್ಗೆ 10 ಗಂಟೆಯೊಳಗೆ ಎಲ್ಲಾ ಆನೆಗಳನ್ನು ಸಂಪೂರ್ಣವಾಗಿ ಅಲಂಕರಿಸಲಾಯಿತು. ನೈಸರ್ಗಿಕವಾಗಿ ಸಿದ್ಧಪಡಿಸಿದ ವಿವಿಧ ಬಣ್ಣಗಳಿಂದ ಆನೆಗಳನ್ನು ಅಲಂಕರಿಸಲಾಯಿತು. ಅದಕ್ಕಾಗಿ 5ರಿಂದ 7 ಕೆಜಿ ಬಣ್ಣ ಬಳಸಲಾಗುತ್ತದೆ.

ಬಣ್ಣದ ಪುಡಿಯನ್ನು ಮರದ ಅರಗಿಗೆ (ಅಂಟು) ಮಿಶ್ರಣ ಮಾಡಿ 3ರಿಂದ 4 ದಿನ ನೆನೆ ಹಾಕಿ ಹದ ಮಾಡಲಾಗುತ್ತದೆ. ಬಳಿಕ, ಆನೆಗಳ ಮೈಮೇಲೆ ಬಳಿಯಲಾಗುತ್ತದೆ. ಮರದ ಅಂಟು ಮಿಶ್ರಣದಿಂದ ಆನೆ ಮೈಮೇಲೆ ಬಣ್ಣವು ಒಂದು ವಾರವಾದರೂ ಉಳಿಯುತ್ತದೆ.

ಇದನ್ನೂ ಓದಿ: Video.. ನಂದಿಧ್ವಜ ಪೂಜೆ ನೆರವೇರಿಸಿ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ.. ಅಭಿಮನ್ಯುವಿಗೆ ಕಾವೇರಿ - ಚೈತ್ರಾ ಸಾಥ್​

ABOUT THE AUTHOR

...view details