ಮೈಸೂರು: ಮೈತ್ರಿ ಸರ್ಕಾರ ಪತನಕ್ಕೆ ಕಾರಣವೇ ಕುಮಾರಸ್ವಾಮಿ. ನಮ್ಮವರನ್ನು ಹೊರಗಿನವರಂತೆ ಕಂಡರು. ಅವರು ನನ್ನನ್ನು ಕೂಡ ಸ್ನೇಹಿತನಂತೆ, ಮೈತ್ರಿ ಪಕ್ಷದ ನಾಯಕನಂತೆ ಕಂಡಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ, ಅವರು ನನ್ನನ್ನು ಶತ್ರುವಿನಂತೆ ಕಂಡು ದ್ವೇಷ ಸಾಧಿಸುತ್ತಲೇ ಹೋದರು ಎಂದು ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ.
ನನ್ನನ್ನ ಕ್ಲರ್ಕ್ ರೀತಿ ನಡೆಸಿಕೊಂಡರು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಧಿಕಾರ ನಡೆಸಲು ಬಾರದವರು ಹೀಗೆಯೇ ಹೇಳೋದು ಎಂದು ಕುಟುಕಿದರು.
ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಅಸಂವಿಧಾನಾತ್ಮಕವಾಗಿ:
ಬಿಜೆಪಿ ಅಧಿಕಾರಕ್ಕೆ ಬಂದ ಕ್ರಮ, ಅಧಿಕಾರ ನಡೆಸುತ್ತಿರುವ ಬಗ್ಗೆ ತೀರ ಟೀಕೆ ಮಾಡಿದ ಸಿದ್ದರಾಮಯ್ಯ, ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಅಸಂವಿಧಾನಾತ್ಮಕವಾಗಿ. ಜನರು ಈವರೆಗೆ 113 ಸೀಟು ಕೊಟ್ಟಿಲ್ಲ. ವಂಚನೆ ಮಾಡಿ ಅಧಿಕಾರ ಕಸಿದುಕೊಂಡಿದ್ದಾರೆ. ಮೈತ್ರಿ ಪಕ್ಷದ ಅತೃಪ್ತ ಶಾಸಕರನ್ನು ಬಳಸಿಕೊಂಡು ಹಿಂಬಾಗಿಲಿನಿಂದ ಕುದುರೆ ವ್ಯಾಪಾರ ಮಾಡಿ ಅನೈತಿಕತೆಯಿಂದಲೇ ಅಧಿಕಾರಕ್ಕೆ ಬಂದಿದ್ದಾರೆ ಎಂದರು.