ಮೈಸೂರು :ಈಶ್ವರಪ್ಪ ಒಬ್ಬ ಕೊಲೆಗಡುಕ, ಅವರನ್ನು ಅರೆಸ್ಟ್ ಮಾಡಿ ತನಿಖೆ ಮಾಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ. ಇಂದು ಈಶ್ವರಪ್ಪನನ್ನ ಬಂಧಿಸಿ ಎಂದು ಆಗ್ರಹಿಸಲು ಮೈಸೂರಿನ ಗಾಂಧಿ ವೃತ್ತದ ಬಳಿ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆತನ ವಿರುದ್ಧ ಹಾಕಲಾಗಿರುವ ಎಫ್ಐಆರ್ನಲ್ಲಿ ಎಒನ್ ಆರೋಪಿಯಾಗಿದ್ದು, ಕೂಡಲೇ ಈಶ್ವರಪ್ಪ ಅವರನ್ನು ಬಂಧಿಸಿ ತನಿಖೆ ಮಾಡಬೇಕು. ಸಾಮಾನ್ಯ ಜನರ ವಿರುದ್ಧ ಎಫ್ಐಆರ್ ಆದರೆ ಅವರನ್ನು ಬಂಧಿಸಿ ತನಿಖೆ ನಡೆಸಲಾಗುತ್ತದೆ. ಅದೇ ರೀತಿ ಈಶ್ವರಪ್ಪನನ್ನ ಬಂಧಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ. 4 ವರ್ಷದಲ್ಲಿ ಬಡವರಿಗೆ ಒಂದು ಮನೆಯನ್ನೂ ನೀಡಿಲ್ಲ. ಬಿಜೆಪಿಯವರಿಗೆ ಧಮ್ ಇದ್ದರೆ ಒಂದೇ ವೇದಿಕೆಯಲ್ಲಿ ಬರಲಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು. ಸರ್ಕಾರ ತನ್ನ ವೈಫಲ್ಯವನ್ನ ಮುಚ್ಚಿಡಲು ಕೋಮುವಾದವನ್ನ ಮುನ್ನೆಲೆಗೆ ತರುವ ಯತ್ನ ಮಾಡುತ್ತಿದೆ.
ರಾಜ್ಯದಲ್ಲಿ ಶಾಂತಿ ಕದಡುವ ಕೆಲಸದ ಜೊತೆಗೆ ಸಮಾಜ ಒಡೆಯುವ ಕೆಲಸವನ್ನು ಮಾಡುತ್ತಿದ್ದು, ಹಿಜಾಬ್, ಹಲಾಲ್ ಹಾಗೂ ವ್ಯಾಪಾರ ನಿರ್ಬಂಧ ಹೇರುವ ಕೆಲಸ ಮಾಡುತ್ತಿದೆ. ದೇಶ ಹಾಗೂ ರಾಜ್ಯಕ್ಕೆ ಅಶಾಂತಿ ಉಂಟು ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.