ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತಮ್ಮ ಮನೆ ದೇವರ ಜಾತ್ರಾ ಮಹೋತ್ಸವಕ್ಕೆ ಭಾಗವಹಿಸಲು ರಾತ್ರಿ ಸಿದ್ದರಾಮನ ಹುಂಡಿಗೆ ಆಗಮಿಸುತ್ತಿದ್ದಾರೆ. ಇಂದಿನಿಂದ ನಾಲ್ಕು ದಿನಗಳ ಮೈಸೂರು ಪ್ರವಾಸ ಕೈಗೊಳ್ಳಲಿರುವ ಅವರು, ಸಿದ್ದರಾಮನ ಹುಂಡಿಯಲ್ಲಿರುವ ಮನೆ ದೇವರಾದ ಸಿದ್ದರಾಮೇಶ್ವರ ದೇವರ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಾತ್ರಾ ಮಹೋತ್ಸವ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ಇಂದು ರಾತ್ರಿ ಬೆಂಗಳೂರಿನಿಂದ ಆಗಮಿಸಿ ಸಿದ್ದರಾಮನ ಹುಂಡಿಯಲ್ಲಿ ವಾಸ್ತವ್ಯ ಹೂಡಲಿರುವ ಅವರು, ಬೆಳಗ್ಗೆ ಮನೆ ದೇವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗ್ರಾಮದಲ್ಲೇ ಶುಕ್ರವಾರ ರಾತ್ರಿಯವರೆಗೆ ಇರಲಿದ್ದಾರೆ. ಇಂದು ರಾತ್ರಿ ಸುಮಾರು 20 ಗ್ರಾಮಗಳಿಂದ ಮೆರವಣಿಗೆಗೆ ದೇವರುಗಳು ಆಗಮಿಸಲಿದ್ದು, ಅವುಗಳ ಪೂಜೆ ಮತ್ತು ಮೆರವಣಿಗೆ ಹಾಗೂ ಪೂಜಾ ಕುಣಿತ ನಡೆಯಲಿದೆ.
ಏಳು ವರ್ಷಗಳ ನಂತರ ಜಾತ್ರೆ:ದೇವಸ್ಥಾನದ ರಿಪೇರಿ ಕೆಲಸ ನಡೆಯುತ್ತಿರುವುದರಿಂದ ಕಳೆದ 7 ವರ್ಷಗಳಿಂದಲೂ ಜಾತ್ರಾ ಮಹೋತ್ಸವ ನಡೆದಿರಲಿಲ್ಲ. ಈಗ ದೇವಸ್ಥಾನದ ಕೆಲಸ ಪೂರ್ಣಗೊಂಡಿದ್ದು, ಜಾತ್ರಾ ಮಹೋತ್ಸವ ನಡೆಯುತ್ತಿದೆ. ಎರಡು ದಿನದ ಹಿಂದೆಯೇ ಸಿದ್ದರಾಮನಹುಂಡಿಯ ತಮ್ಮ ಮನೆಗೆ ಆಗಮಿಸಿರುವ ಪತ್ನಿ ಪಾರ್ವತಮ್ಮ ಸಿದ್ದರಾಮಯ್ಯ ದೇವರ ಕೆಲಸದಲ್ಲಿ ಭಾಗಿಯಾಗಿದ್ದಾರೆ.
ನಾಲ್ಕು ದಿನ ಮೈಸೂರು ಜಿಲ್ಲಾ ಪ್ರವಾಸ: ತಮ್ಮ ಮನೆ ದೇವರ ಕಾರ್ಯಕ್ರಮದಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ದಿನವಿಡೀ ಭಾಗವಹಿಸಲಿದ್ದು, ನಂತರ ಶನಿವಾರ ಹಾಗೂ ಭಾನುವಾರ ಹುಣಸೂರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತಮ್ಮ ಮುಂದಿನ ಸ್ಪರ್ಧೆ ಮೈಸೂರು ಜಿಲ್ಲೆಯಿಂದಲೇ ಮಾಡುವ ಇಚ್ಚೆ ಹೊಂದಿರುವ ಸಿದ್ದರಾಮಯ್ಯ, ಎರಡು ದಿನಗಳ ಕಾಲ ತಮ್ಮ ಸ್ಥಳೀಯ ಮುಖಂಡರು ಹಾಗೂ ಬೆಂಬಲಿಗರೊಂದಿಗೆ ತಮ್ಮ ಮನೆಯಲ್ಲೇ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಪೊಲೀಸರಿಗೆ ಅಥವಾ ಕೋರ್ಟ್ಗೆ ಪಾಸ್ಪೋರ್ಟ್ ಮುಟ್ಟುಗೋಲು ಹಾಕುವ ಅಧಿಕಾರವಿಲ್ಲ: ಹೈಕೋರ್ಟ್