ಮೈಸೂರು: ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘ ಮಾಡಿರುವ ಶೇ.40ರಷ್ಟು ಕಮಿಷನ್ ಆರೋಪ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯವರು ನ್ಯಾಯಾಂಗ ತನಿಖೆಗೆ ಒಪ್ಪಿಕೊಳ್ಳುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ನಗರದಲ್ಲಿ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಮಾಧ್ಯಮದವರ ಜೊತೆ ಪ್ರಸ್ತುತ ವಿಚಾರಗಳ ಕುರಿತು ಸಂವಾದ ನಡೆಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 3 ವರ್ಷಗಳಿಗಿಂತ ಹೆಚ್ಚಾಗಿದೆ. ಜನರ ಆಶೀರ್ವಾದದೊಂದಿಗೆ ಬಂದ ಸರ್ಕಾರವಲ್ಲ, ಅನೈತಿಕವಾಗಿ ರಚನೆಯಾಗಿರುವ ಸರ್ಕಾರ ಎಂದು ಟೀಕಿಸಿದರು.
ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಎರಡು ವರ್ಷಗಳ ಆಡಳಿತ ಮಾಡಿದ್ದಾರೆ. ಆದರೆ, ಅಧಿಕಾರಕ್ಕೆ ಬಂದು 3 ವರ್ಷಗಳು ಕಳೆದರೂ ಬಿಜೆಪಿ ಪ್ರಣಾಳಿಕೆಯ ಶೇ.10ರಷ್ಟು ಕೂಡ ಭರವಸೆ ಈಡೇರಿಸಿಲ್ಲ. ಇತ್ತೀಚೆಗೆ ಉಮೇಶ್ ಕತ್ತಿ ಕೇಂದ್ರ ಸರ್ಕಾರ ಒಪ್ಪಿಕೊಂಡರೆ ಬಡವರಿಗೆ ಅಕ್ಕಿ ಕೊಡುವುದನ್ನು ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಅಕ್ಕಿ ಕೊಡಲು ದುಡ್ಡಿಲ್ಲದೆ ಇರಬಹುದು ಹಾಗೂ ಇನ್ನೊಂದು ಹಸಿದವರ ಮತ್ತು ಬಡವರ ಮೇಲೆ ಅವರಿಗೆ ವಿರೋಧ ಇರಬಹುದು ಎಂದು ವಾಗ್ದಾಳಿ ನಡೆಸಿದರು.
ಮುಗಿಲು ಮುಟ್ಟಿದ ಭ್ರಷ್ಟಾಚಾರ:ಈ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈ ಬಗ್ಗೆ ರಾಜ್ಯದ ಜನ ಮಾತನಾಡುತ್ತಿದ್ದಾರೆ, ವಿಧಾನಸೌಧದ ಗೋಡೆಗಳು ಹೇಳುತ್ತಿವೆ, ಅಧಿಕಾರಿಗಳು, ರಾಜ್ಯ ಗುತ್ತಿಗೆದಾರರ ಸಂಘದವರು ಹೇಳುತ್ತಿದ್ದಾರೆ. ಗುತ್ತಿಗೆದಾರರ ಸಂಘದವರು ಎರಡನೇ ಬಾರಿ ಮಾಧ್ಯಮದ ಮುಂದೆ ಬಂದು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಪಿಎಸ್‌ಐ ನೇಮಕಾತಿ ಏನಾಗಿದೆ?:ಪಿಎಸ್‌ಐ ನೇಮಕಾತಿಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಯಾವ ಭ್ರಷ್ಟಾಚಾರ, ಅಕ್ರಮ ನಡೆದಿಲ್ಲ. ಕಾನೂನು ರೀತಿ ನೇಮಕಾತಿ ನಡೆದಿದೆ ಎಂದಿದ್ದರು. ಇದೇ ರೀತಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದರು. ಆದರೆ ಈಗ ಏನಾಗಿದೆ?. ಎಡಿಜಿಪಿ ಅಮೃತ್ ಪೌಲ್ 300 ಅಭ್ಯರ್ಥಿಗಳಿಂದ 30ಲಕ್ಷದಿಂದ 1 ಕೋಟಿ ವರೆಗೆ ಹಣ ವಸೂಲಿ ಮಾಡಿದ್ದಾರೆ. ಇದರಲ್ಲಿ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಇವರೆಲ್ಲರೂ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಸತ್ಯ ಹೊರಬರಬೇಕಾದರೆ ನ್ಯಾಯಾಂಗ ತನಿಖೆಯಿಂದ ಮಾತ್ರ ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.