ಮೈಸೂರು:ಬಿ.ಎಲ್.ಸಂತೋಷ್ ಅವರು ಸೋಮಣ್ಣರನ್ನು ವರುಣದಲ್ಲಿ ನಿಲ್ಲಿಸಿ ಹರಕೆಯ ಕುರಿ ಮಾಡಿದ್ದಾರೆ. ನಾನು ವರುಣದಲ್ಲಿ ಗೆಲ್ಲುವುದು ಖಚಿತ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನಗೆ ಸ್ವಲ್ಪ ಸೋಂಕು ಇತ್ತು. ಆದ್ದರಿಂದ ಜ್ವರ ಬಂದಿದೆ. ಎರಡು ಮೂರು ದಿನಗಳಲ್ಲಿ ಸರಿಯಾಗುತ್ತದೆ. ನಾನು ಎರಡು ಬಾರಿ ವರುಣದಿಂದ ಶಾಸಕನಾಗಿದ್ದೆ. ನನ್ನ ಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡೇ ಮಾಡುತ್ತಾರೆ. ಆದರೆ ಬಿಜೆಪಿ ಅಭ್ಯರ್ಥಿ ಹೊರಗಿನವರು. ಅವರಿಗೆ ಜನ ಬೆಂಬಲ ಕೊಡುವುದಿಲ್ಲ ಎಂದರು.
ಬಿ.ಎಲ್.ಸಂತೋಷ್ ಕರ್ನಾಟಕದಲ್ಲಿ ಎಲ್ಲರ ಟಿಕೆಟ್ ತಪ್ಪಿಸುತ್ತಿದ್ದಾರೆ ಎಂಬ ಜಗದೀಶ್ ಶೆಟ್ಟರ್ ಮಾತು ಸರಿ ಇದೆ. ಕರ್ನಾಟಕದಲ್ಲಿ ಬಿಜೆಪಿ ಇವರ ಕಪಿಮುಷ್ಠಿಯಲ್ಲಿದೆ. ನನ್ನ ವಿರುದ್ಧ ಸೋಮಣ್ಣ ಸ್ಪರ್ಧೆ ಮಾಡಲು ಸಿದ್ದರಿರಲಿಲ್ಲ. ಬಿ.ಎಲ್.ಸಂತೋಷ್ ಅವರು ಸೋಮಣ್ಣರನ್ನು ಕರೆದುಕೊಂಡು ಬಂದು ನನ್ನ ವಿರುದ್ಧ ಸ್ಪರ್ಧೆ ಮಾಡಿಸಿ ಹರಿಕೆಯ ಕುರಿ ಮಾಡಿದ್ದಾರೆ. ಸೋಮಣ್ಣರ ಮಗನಿಗೆ ಗೊವಿಂದರಾಜನಗರದಿಂದ ಟಿಕೆಟ್ ತಪ್ಪಿಸಿದ್ದಾರೆ ಎಂದು ಹೇಳಿದರು.
ರಾಮದಾಸ್ ಕಾಂಗ್ರೆಸ್ಗೆ ಬಂದರೆ ಸ್ವಾಗತ:ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ರಾಮದಾಸ್ ಮೇಲೆ ಯಾವುದೇ ಆರೋಪ ಇರಲಿಲ್ಲ. ಅವರಿಗೂ ಟಿಕೆಟ್ ನೀಡಿಲ್ಲ. ರಾಮದಾಸ್ ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬಂದರೆ ಸ್ವಾಗತ ಎಂದು ಹೇಳಿದ ಸಿದ್ದರಾಮಯ್ಯ, ಮೈಸೂರಿನ ಮನೆಯಲ್ಲಿ ಸ್ಥಳೀಯ ಮುಖಂಡರ ಸಭೆ ನಡೆಸಿ ನಂತರ ನಾಳೆ ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.