ಮೈಸೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವ ಅವಕಾಶ ಇದೆ. 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸುವವನು ನಿಜವಾದ ನಾಯಕ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಸ್ಪರ್ಧೆಯ ಬಗ್ಗೆ ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿಂದು ಖಾಸಗಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ನನಗೆ ಹೆಚ್ಚು ವರ್ಷ ಬದುಕಬೇಕೆಂಬ ಆಸೆಯಿದೆ. ಬದುಕಿ ಜನರ ಸೇವೆ ಮಾಡಬೇಕು ಎಂಬುದು ನನ್ನ ಆಸೆ. ಆದರೆ ನಾನು ಎಷ್ಟು ವರ್ಷ ಬದುಕುತ್ತೇನೆ ಎಂಬುದು ಗೊತ್ತಿಲ್ಲ, ಹೆಚ್ಚು ವರ್ಷ ಬದುಕಬೇಕೆಂಬ ಆಸೆಯಂತೂ ಇದೆ ಎಂದರು.
ರಾಜ್ಯದ 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡುವವನೇ ನಿಜವಾದ ನಾಯಕ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸುವ ಅವಕಾಶವಿದೆ. ಜನ ಬಯಸಿದ ಕಡೆ ಸ್ಪರ್ಧೆ ಮಾಡುತ್ತೇನೆ. ಕೋಲಾರದವರು ಬಯಸಿದರೆ ಕೋಲಾರದಲ್ಲಿ, ವರುಣದವರು ಬಯಸಿದರೆ ವರುಣದಲ್ಲಿ ಸ್ಪರ್ಧಿಸುತ್ತೇನೆ. ಮುಖ್ಯವಾಗಿ ಹೈಕಮಾಂಡ್ ಸೂಚಿಸಿದ ಕಡೆ ಸ್ಪರ್ಧೆ ಮಾಡುತ್ತೇನೆ ಎಂದು ತಮ್ಮನ್ನು ಟೀಕೆ ಮಾಡುವವರಿಗೆ ಪರೋಕ್ಷವಾಗಿ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ಇನ್ನು,ಶಾಸಕ ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಪ್ರಜಾಪ್ರಭುತ್ವಕ್ಕೆ ಮಾರಕ. ಸಾಹಿತಿಗಳು, ಚಿಂತಕರು, ಪತ್ರಕರ್ತರಿಗೆ ಹಾಗೂ ಪ್ರತಿ ಪಕ್ಷಗಳಿಗೆ ಬೆದರಿಕೆ ಹಾಕುವುದು ಒಳ್ಳೆಯ ಬೆಳವಣಿಗೆ ಅಲ್ಲ. ಬಿಜೆಪಿ ಆವರು ಮೊದಲಿನಿಂದಲೂ ಇಂತಹುಗಳನ್ನು ಪೋಷಣೆ ಮಾಡುತ್ತಾ ಬರುತ್ತಿದ್ದಾರೆ. ಕೇಂದ್ರ ಸರ್ಕಾರವು ಇದರ ಪರವಾಗಿದೆ ಎಂದು ಆರೋಪಿಸಿದರು.