ಮೈಸೂರು: 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿಯೇ ಇಲ್ಲದ ಸಮಾಜ ನಿರ್ಮಾಣ ಮಾಡಲು ಬಯಸಿದ್ದರು. ಆದರೆ ಇಂದಿಗೂ ಅದು ಸಾಧ್ಯವಾಗಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ವಿಶ್ವಕರ್ಮ ಸೇವಾಟ್ರಸ್ಟ್ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜಾತಿ, ವರ್ಗ, ಅಸಮಾನತೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಯಾರು ಶಾಪ ಹಾಕಿದ್ರು, ಮಾಟ ಮಂತ್ರ ಮಾಡಿದ್ರೂ ನನಗೆ ಏನು ಆಗಲ್ಲ. ಶಸ್ತ್ರ ಚಿಕಿತ್ಸೆ ಮಾಡುವಾಗ ಯಾವುದೋ ಧರ್ಮದ ವ್ಯಕ್ತಿಯ ರಕ್ತ ಪಡೆದವರು, ಗುಣಮುಖವಾದ ಬಳಿಕ ಆ ಧರ್ಮ ಈ ಧರ್ಮ ಅನ್ನೋದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ನಂತರ ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರೂ ವಿದ್ಯೆ ಕಲಿಯಲು ಸಾಧ್ಯವಾಯಿತು ಎಂದು ಹೇಳಿದ ಅವರು, ವೇದಿಕೆ ಮೇಲೆ ಆಸೀನರಾಗಿದ್ದವರನ್ನೇ ಉದಾಹರಿಸುತ್ತ ಪ್ರತಿಯೊಬ್ಬರ ಜಾತಿ ಉಲ್ಲೇಖಿಸುತ್ತ, ರಾಜೀವ್ ನೀವು ಬ್ರಾಹ್ಮಣರಲ್ಲವೇ? ಎಂದು ಪ್ರಶ್ನಿಸಿ, ಸಂವಿಧಾನದಿಂದಾಗಿ ಎಲ್ಲರೂ ಈಗ ಸಮಾನವಾಗಿ ಕುಳಿತುಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.
ವಿಶ್ವಕರ್ಮ ಜನಾಂಗದಲ್ಲಿ ಹೆಚ್ಚು ಬಡವರಿದ್ದರೂ, ಬುದ್ಧಿವಂತರಾಗಿದ್ದಾರೆ. ಮೂರ್ತಿ ಕೆತ್ತುವವರು ನೀವು, ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತರ ನೀವು ಹೊರಗಡೆ, ಪೂಜೆ ಮಾಡುವವರು ಒಳಗಡೆ. ವಡ್ಡರು ಕಲ್ಲುಗಳನ್ನು ಒಡೆದು ಗೋಡೆ ಕಟ್ಟುತ್ತಾರೆ. ಆದರೆ, ಅವರಿಗೆ ಪೂಜೆ ಮಾಡಲು ಅವಕಾಶವಿಲ್ಲ. ಒಳಗಡೆ ಪೂಜೆ ಮಾಡುವವರು ಕೊಡುವ ತೀರ್ಥ ಪ್ರಸಾದ ಮಾತ್ರ ಪಡೆದುಕೊಳ್ಳಬೇಕು. ಈಗಲೂ ಹಲವೆಡೆ ದಲಿತ ಸಮುದಾಯಕ್ಕೆ ದೇಗುಲ ಪ್ರವೇಶಕ್ಕೆ ಅವಕಾಶವಿಲ್ಲ. ಈ ರೀತಿಯ ತಾರತಮ್ಯ ತೊಡೆದುಹಾಕಲು ನಾರಾಯಣ ಗುರೂಜಿ ಮುಂದಾದರು ಎಂದರು.
ನಿಮ್ಮೆಲ್ಲರ ಆಶೀರ್ವಾದದಿಂದ ನಾವು ಮತ್ತೆ ಅಧಿಕಾರಕ್ಕೆ ಬಂದರೆ ವಿಶ್ವಕರ್ಮ ಸಮುದಾಯದ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಕಾಯಕ ಮಾಡುವವರು ಯಾರೂ ಶ್ರೀಮಂತರಲ್ಲ. ಕಾಯಕ ಮಾಡುವುದರ ಮೇಲೆ ಜಾತಿಗಳಾಗಿವೆ. ಚಾತುರ್ವರ್ಣದಲ್ಲಿ ನಾವೆಲ್ಲರೂ ಶೂದ್ರರು. ನಾವೆಲ್ಲರೂ ಕಾಯಕ ಮಾಡುತ್ತೇವೆ, ಅಂದರೆ ಉತ್ಪಾದನೆ ಮಾಡುತ್ತೇವೆ. ನಾವು ಉತ್ಪಾದನೆ ಮಾಡಿದ್ದನ್ನು ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಅನುಭವಿಸುತ್ತಿದ್ದರು ಎಂದರು.
ಇದನ್ನೂ ಓದಿ: ಸಿದ್ದರಾಮಯ್ಯನವರಿಗೆ ವಯಸ್ಸು ಎಷ್ಟಾದರೂ ಇರಲಿ ತಕರಾರು ಯಾಕೆ : ಎಚ್ ಕೆ ಪಾಟೀಲ