ಮೈಸೂರು:ಕಾಂಗ್ರೆಸ್ ಈ ಬಾರಿ 130 ರಿಂದ 150 ಸ್ಥಾನ ಗೆಲ್ಲುತ್ತದೆ ಎಂದು ನಾವು ಅಂದಾಜು ಮಾಡಿದ್ದೆವು. ಅದೇ ರೀತಿ ಈ ಬಾರಿ ಸಮೀಕ್ಷೆಗಳು ಹೇಳುತ್ತಿವೆ. ನಾವು ನಿರೀಕ್ಷೆ ಮಾಡಿದ ಫಲಿತಾಂಶ ಬರಲಿದ್ದು, ನಾನು ವರುಣಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನಿನ್ನೆ ರಾತ್ರಿ ಮೈಸೂರಿನ ಮನೆಯಲ್ಲಿ ಮಾತನಾಡಿದ ಅವರು, ಚುನಾವಣೋತ್ತರ ಸಮೀಕ್ಷೆಗಳಲ್ಲಿ ಕಾಂಗ್ರೆಸ್ಗೆ ಬಹುಮತ ಬರುತ್ತದೆ ಎಂದು ಹೇಳಿದ್ದಾರೆ. ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರಲಿದೆ. ಕರಾವಳಿ ಭಾಗದಲ್ಲೂ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ನಾವು ಜನರ ನಾಡಿಮಿಡಿತ ಸರಿಯಾಗಿ ಅರ್ಥ ಮಾಡಿಕೊಂಡಿದ್ದೇವೆ. ಯಾವ ಫಲಿತಾಂಶವನ್ನು ನಿರೀಕ್ಷೆ ಮಾಡಿದ್ದೆವೋ ಅದೇ ಫಲಿತಾಂಶ ಬರಲಿದೆ. ಬಜರಂಗದಳದ ವಿಚಾರ ವಿವಾದವೇ ಅಲ್ಲ, ನಮ್ಮ ಪ್ರಣಾಳಿಕೆಯಲ್ಲಿ ಆ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. ಬಿಜೆಪಿಯವರು ಅದನ್ನು ಅಪಪ್ರಚಾರ ಮಾಡಿದರು ಅಷ್ಟೇ ಎಂದು ಸ್ಪಷ್ಟನೆ ನೀಡಿದರು.
ಬಲಗೈ ಬೆರಳಿಗೆ ಇಂಕು, ಸಿದ್ದರಾಮಯ್ಯ ಸ್ಪಷ್ಟನೆ:ವಿಪಕ್ಷ ನಾಯಕಸಿದ್ದರಾಮಯ್ಯ ಅವರು ತಮ್ಮ ಬಲಗೈಗೆ ಅಳಿಸಲಾಗದ ಇಂಕು ಹಾಕಲಾಗಿರುವ ಬಗ್ಗೆ ಮತಗಟ್ಟೆ ಅಧಿಕಾರಿಗಳಿಗೆ ಕಾರಣ ಹೇಳಿದ್ದು, ವೈದ್ಯಕೀಯ ಕಾರಣಗಳಿಂದಾಗಿ ಎಡಗೈಗೆ ಇಂಕು ಬೇಡ ಎಂಬ ಕಾರಣ ತಿಳಿಸಿದ್ದೇನೆ. ನಿಯಮ-49ರ ಪ್ರಕಾರ ಬಲಗೈನ ತೋರು ಬೆರಳಿಗೆ ಇಂಕು ಹಾಕಲಾಗಿದೆ ಎಂದು ಸಿದ್ದರಾಮಯ್ಯನವರು ಸ್ಪಷ್ಟಪಡಿಸಿದ್ದಾರೆ.
ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದ ಸಿದ್ದರಾಮಯ್ಯ:ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಹೇಳಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ಅವರು, "ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ನನ್ನದೊಂದು ವಿಶೇಷ ಮನವಿ. ಚುನಾವಣೆಗಾಗಿ ಮನೆ ಮತ್ತು ಸಂಸಾರ ತೊರೆದು ಕೆಲಸ ಮಾಡಿದ್ದೀರಿ. ಈಗ ಸ್ವಲ್ಪ ಬಿಡುವು ಮಾಡಿಕೊಂಡು ತಂದೆ-ತಾಯಿ, ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯಿರಿ. ಪ್ರಾಮಾಣಿಕವಾದ ನಮ್ಮ ಹೋರಾಟ ಖಂಡಿತ ಫಲಪ್ರದವಾಗುತ್ತದೆ. ಮತ್ತೊಮ್ಮೆ ನಿಮಗೆಲ್ಲರಿಗೂ ಧನ್ಯವಾದಗಳು ಮತ್ತು ಶುಭಾಶಯಗಳು ಎಂದಿದ್ದಾರೆ.
ಸಮೀಕ್ಷೆಗಳಿಗೆ ಆಧಾರ ಇರುವುದಿಲ್ಲ- ಬಿ ಎಸ್ ಯಡಿಯೂರಪ್ಪ:ರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಯಾವುದೇ ಸಮೀಕ್ಷೆಗಳು ಏನೇ ಹೇಳಲಿ, ಬಿಜೆಪಿ ರಾಜ್ಯದಲ್ಲಿ 115 ಸ್ಥಾನ ಗಳಿಸಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ಶಿಕಾರಿಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿ. ವೈ. ವಿಜಯೇಂದ್ರ 40 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷದ ಎಲ್ಲಾ ಮುಖಂಡರೊಂದಿಗೆ ಮತ್ತು ನಾಯಕರೊಂದಿಗೆ ಮಾತನಾಡಿದ್ದೇನೆ. ಎಲ್ಲರ ಅಭಿಪ್ರಾಯವನ್ನು ಸಂಗ್ರಹ ಮಾಡಿದ್ದೇನೆ. ನಾನು ಹೋದಾಗ ಸಿಕ್ಕ ಜನ ಬೆಂಬಲವನ್ನು ನೋಡಿ ಹೇಳುತ್ತಿದ್ದೇನೆ. ಎಸ್ಸಿ - ಎಸ್ಟಿ ಸಮುದಾಯದವರಿಗೆ ಕೊಟ್ಟಂತಹ ಮೀಸಲಾತಿ ಗಮನಿಸಿದಾಗ ಈ ಸಮೀಕ್ಷೆಗಳಿಗೆ ಆಧಾರ ಇರುವುದಿಲ್ಲ ಎಂದರು.
ಇದನ್ನೂ ಓದಿ:ಬಿಜೆಪಿಗೆ ಬಹುಮತ ಬರುತ್ತೆ, ಅತಂತ್ರ ಬಂದ್ರೆ ಜೆಡಿಎಸ್ ಜತೆ ಒಪ್ಪಂದ ಆಗಬಹುದು: ಎಂ ಪಿ ರೇಣುಕಾಚಾರ್ಯ