ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಜ್ಯೋತಿಷ್ಯ ಕಲಿಯುತ್ತಿರಬೇಕು; ಎಸ್. ಟಿ.ಸೋಮಶೇಖರ್ ವ್ಯಂಗ್ಯ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ 'ಡಬಲ್ ಇಂಜಿನ್'ಅಭಿವೃದ್ಧಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಸೋಮಶೇಖರ್, ರಾಜ್ಯದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದ್ದಲ್ಲದೇ, ವೇಗ ಪಡೆದುಕೊಂಡಿದೆ ಎಂದರು.

ST Somashekar
ಸಚಿವ ಎಸ್. ಟಿ.ಸೋಮಶೇಖರ್

By

Published : Jan 19, 2021, 12:07 PM IST

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವಾಗ ಜ್ಯೋತಿಷ್ಯ ಹೇಳುತ್ತಿದ್ದಾರೋ ಗೊತ್ತಿಲ್ಲ. ಈಗ ಪ್ರತಿಪಕ್ಷದ ನಾಯಕರಾಗಿದ್ದರೂ ಕೆಲಸ ಇಲ್ಲದೇ ಜ್ಯೋತಿಷ್ಯ ಕಲಿಯುತ್ತಿರಬೇಕು. ಅದಕ್ಕೆ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಮಾತನಾಡುತ್ತಿರಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಈಗ ಪುರುಸೊತ್ತು ಇರಬೇಕು. ವಿರೋಧ ಪಕ್ಷದ ನಾಯಕರಾಗಿ ಮಾಡಬೇಕಾದ ಕೆಲಸವನ್ನು ಮಾಡುವುದು ಬಿಟ್ಟು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಮೊದಲಿಗೆ ಅವರ ಪಕ್ಷದಲ್ಲಾಗುತ್ತಿರುವುದನ್ನು ನೋಡಿಕೊಳ್ಳಲಿ. ನಮ್ಮ ಪಕ್ಷದ ಉಸಾಬರಿ ಏಕೆ? ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದರು.

ನಮಗೆ ಕೇಂದ್ರ ಗೃಹ ಸಚಿವರ ಸರ್ಟಿಫಿಕೇಟ್ ಸಾಕು. ಸಿದ್ದರಾಮಯ್ಯ ಅವರ ಸರ್ಟಿಫಿಕೇಟ್ ಬೇಡ. ಅವರು ಪದೇ ಪದೆ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ತಮ್ಮ ಪಕ್ಷದಲ್ಲಿನ ಗೊಂದಲಗಳನ್ನು ಬಗೆಹರಿಸಿಕೊಳ್ಳಲಿ. ಪ್ರಚಾರಕ್ಕಾಗಿ ಅವರು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೋವಿಡ್ ಹಾಗೂ ಉಳಿದ ಪರಿಸ್ಥಿತಿಯಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೇಳಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇನ್ನು ಎರಡೂವರೆ ವರ್ಷ ಆಡಳಿತ ನಡೆಸುತ್ತಾರೆ. ಉತ್ತಮ ಮತ್ತು ದಕ್ಷ ಆಡಳಿತ ನೀಡುತ್ತಿದ್ದಾರೆ ಶಾ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದರು.

ಓದಿ:ಮುನಿರತ್ನರನ್ನು ಸಂಪುಟದಿಂದ ಹೊರಗಿಟ್ಟಿದ್ಯಾಕೆ ಗೊತ್ತಾಗ್ಲಿಲ್ಲ: ಎಸ್​.ಟಿ. ಸೋಮಶೇಖರ್

ಬೆಂಗಳೂರು ಅಭಿವೃದ್ಧಿ ಸಿಡಿ ಮಾತ್ರ ಗೊತ್ತು: ನನಗೆ ಯಾವುದೇ ಸಿಡಿ ಬಗ್ಗೆ ಮಾಹಿತಿ ಇಲ್ಲ. ನನಗೆ ಗೊತ್ತಿರುವುದು ಬೆಂಗಳೂರು ಅಭಿವೃದ್ಧಿಯ ಸಿಡಿ. ಮುಖ್ಯಮಂತ್ರಿಗಳು ಈಗಾಗಲೇ 2 ಸಭೆ ನಡೆಸಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಚರ್ಚಿಸಿದ್ದಾರೆ. ಅದಕ್ಕೊಂದು ರೂಪುರೇಷೆ ನೀಡಿ ಸಂಬಂಧಿಸಿದ ಸಿಡಿಯನ್ನು ನಮಗೆ ಕಳುಹಿಸುವುದಾಗಿ ಹೇಳಿದ್ದಾರೆ. ಅದು ಬಿಟ್ಟು ಬೇರೆ ಮಾಹಿತಿ ನನಗೆ ಇಲ್ಲ. ಅದನ್ನು ಹೇಳಿದವರಿಗೇ ಕೇಳಬೇಕು ಎಂದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ 'ಡಬಲ್ ಇಂಜಿನ್'ಅಭಿವೃದ್ಧಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಸೋಮಶೇಖರ್, ರಾಜ್ಯದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದ್ದಲ್ಲದೇ, ವೇಗ ಪಡೆದುಕೊಂಡಿದೆ. ಕೋವಿಡ್ ಹಿನ್ನೆಲೆಯಲ್ಲಿ 8-9 ತಿಂಗಳು ಎಲ್ಲ ಕಡೆಯೂ ಅಭಿವೃದ್ಧಿ ಕುಂಠಿತಗೊಂಡಿತ್ತು. ಆದರೆ, ಈಗ ಎಲ್ಲವೂ ಪ್ರಾರಂಭವಾಗಿದೆ. ಒಂದೊಂದು ಕ್ಷೇತ್ರಕ್ಕೆ ಲೋಕೋಪಯೋಗಿಯಿಂದ ಸುಮಾರು 25 ಕೋಟಿ ರೂಪಾಯಿಯಂತೆ ಅನುದಾನ ಬಿಡುಗಡೆ ಮಾಡಲಾಗಿದೆ. ಹೀಗೆ ಒಂದೊಂದಾಗಿ ಚಾಲನೆ ನೀಡಲಾಗುತ್ತಿದೆ ಎಂದರು.

ABOUT THE AUTHOR

...view details