ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನನ್ನನ್ನು ಕಾಂಗ್ರೆಸ್ಗೆ ಬಾ ಅಂತಾ ಕರೆದಿಲ್ಲ. ಆದರೆ ಬಿಜೆಪಿಗೆ ಮಾತ್ರ ಹೋಗಬೇಡ ಎಂದು ಹೇಳಿದ್ದಾರೆ ಅಂತಾ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಬಹಿರಂಗಪಡಿಸಿದ್ದಾರೆ.
ಇಂದು ಮೈಸೂರು ಮಹಾನಗರ ಪಾಲಿಕೆಯಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸರ್ವರಿಗೂ ಸೂರು ಯೋಜನೆಗೆ ಶನಿವಾರ ಚಾಲನೆ ನೀಡಲಾಗುವುದು ಎಂದರು.
ಸಿದ್ದರಾಮಯ್ಯ ನನ್ನನ್ನು ಅವರ ಪಕ್ಷಕ್ಕೆ ಕರೆದಿಲ್ಲ. ಬಿಜೆಪಿಗೆ ಮಾತ್ರ ಹೋಗಬೇಡವೆಂದಿದ್ದರು. ಜೆಡಿಎಸ್ನಲ್ಲೇ ಇರು ಅಂತ ಕೂಡ ಹೇಳಿಲ್ಲ. ಈ ಬಗ್ಗೆ ಅವರ ಹೇಳಿಕೆಯನ್ನು ಮೊದಲ ಬಾರಿಗೆ ಬಹಿರಂಗವಾಗಿ ಹೇಳುತ್ತಿದ್ದೇನೆ. ನನ್ನ ರಾಜಕೀಯದ ಮುಂದಿನ ನಿರ್ಧಾರವನ್ನು 2-3 ತಿಂಗಳಿನಲ್ಲಿ ತೀರ್ಮಾನ ಮಾಡುತ್ತೇನೆಂದು ಎಂದು ಜಿಟಿಡಿ ಹೇಳಿದ್ರು.
ಸಿದ್ದರಾಮಯ್ಯ ಕಳೆದ ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋತಿರುವ ಕಾರಣ ಪುನಃ ಆ ಕ್ಷೇತ್ರಕ್ಕೆ ಬರಲು ಆತಂಕವಿದೆ. ಸಿದ್ದರಾಮಯ್ಯರಿಗೆ ಸಿಎಂ ಆಗುವ ಆಸೆ ಇದ್ದು, ಗೆದ್ದು ಬರುವ ಸೇಫ್ ಪ್ಲೇಸ್ಗಳನ್ನು ಹುಡುಕುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರಾಜ್ಯ ಪ್ರವಾಸ ಮಾಡಬೇಕು. ಅದಕ್ಕಾಗಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರುವುದಿಲ್ಲ ಅಂತಾ ಹೇಳಿದ್ದಾರೆ ಎಂದರು.
ಇದನ್ನೂ ಓದಿ:ಹಾಸನ: ಪ್ರೀತಿಸಿ ವರಿಸಿದ ಪತ್ನಿಯನ್ನು ಬರ್ಬರವಾಗಿ ಕೊಂದು ಪರಾರಿಯಾದ ಪತಿ
ಚಾಮುಂಡೇಶ್ವರಿ ಕ್ಷೇತ್ರಕ್ಕೆ ಜಿ.ಟಿ ದೇವೇಗೌಡ ಏನೂ ಕೆಲಸ ಮಾಡಿಲ್ಲ ಎಂಬ ಸಿದ್ದರಾಮಯ್ಯರ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಶಾಸಕರಾಗಿ, ಉಪ ಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿದ್ದವರು. ಅವರು ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಆದರೆ ನಾನು ಕೇವಲ ಶಾಸಕ. ಕೆಲವು ತಿಂಗಳು ಮಾತ್ರ ಸಚಿವನಾಗಿದ್ದೆ. ಅವರಷ್ಟು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವೇ? ನಾನೇನು ಅಭಿವೃದ್ಧಿ ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತು ಎಂದು ಹೇಳಿದರು.
ಇತ್ತೀಚೆಗೆ ಒಕ್ಕಲಿಗರು ತಮ್ಮನ್ನು ಬೆಂಬಲಿಸಬೇಕು ಎಂಬ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಜನರ ತೀರ್ಮಾನವಾಗಲು ಇನ್ನೂ ಸಮಯ ಬೇಕು ಎಂದಷ್ಟೇ ಹೇಳಿದರು.