ಕರ್ನಾಟಕ

karnataka

ETV Bharat / state

ಕೈಗಾರಿಕೋದ್ಯಮಿಗಳಿಗೆ ಬ್ಯಾಂಕ್​ ಸೌಲಭ್ಯಗಳ ಸೂಕ್ತ ಮಾಹಿತಿ ಲಭ್ಯವಾಗಬೇಕು: ಡಾ. ಇಶಿತಾ ಗಂಗೂಲಿ ತ್ರಿಪಾಠಿ - ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆ

ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಿತು.

ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತು ಅರಿವು ಕಾರ್ಯಕ್ರಮ
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತು ಅರಿವು ಕಾರ್ಯಕ್ರಮ

By ETV Bharat Karnataka Team

Published : Dec 16, 2023, 9:11 AM IST

ಮೈಸೂರು: ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಬ್ಯಾಂಕ್​ಗಳಿಂದ ಸೌಲಭ್ಯ ದೊರೆಯುತ್ತಿದ್ದು ಈ ಕುರಿತು ಹೆಚ್ಚಿನ ಮಾಹಿತಿ ಅವರಿಗೆ ತಲುಪಬೇಕು ಎಂದು ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಉದ್ಯಮಗಳ ಸಚಿವಾಲಯದ ಅಪರ ಅಭಿವೃದ್ಧಿ ಆಯುಕ್ತರಾದ ಡಾ. ಇಶಿತಾ ಗಂಗೂಲಿ ತ್ರಿಪಾಠಿ ಅವರು ತಿಳಿಸಿದರು.

ನಗರದ ಹೋಟೆಲ್ ಪೈ ವಿಸ್ತಾನಲ್ಲಿ ಸಿಡ್ಬಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕಾಸಿಯಾ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅರಿವು ಕಾರ್ಯಕ್ರಮಗಳು ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಕೈಗಾರಿಕೋದ್ಯಮಿಗಳಿಗೆ ವಿಶೇಷ ರೀತಿಯಲ್ಲಿ ಸಹಾಯಕಾರಿಯಾಗಿದ್ದು ಈ ರೀತಿಯ ಕಾರ್ಯಕ್ರಮಗಳ ಮೂಲಕ ಅವರಿಗಾಗಿ ರೂಪಿಸಿರುವ ಸವಲತ್ತುಗಳು, ಯೋಜನೆಗಳು ಹಾಗೂ ಹಣಕಾಸಿನ ನೆರವು ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದರು.

ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಕೈಗಾರಿಕೋದ್ಯಮಗಳಲ್ಲಿ ಆರ್ಥಿಕ ಸಾಕ್ಷರತೆ (ಫೈನಾನ್ಸಿಯಲ್ ಲಿಟ್ರಸಿ) ತರುವುದು ಸರ್ಕಾರದ ಉದ್ದೇಶವಾಗಿದ್ದು, ದೇಶದಲ್ಲಿನ ಒಂದು ಕೋಟಿ ಅನೌಪಚಾರಿಕ ಕೈಗಾರಿಕೋದ್ಯಮಿಗಳನ್ನು ಔಪಚಾರಿಕ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಡಿಯಲ್ಲಿ ತರಲಾಗಿದೆ. 2/3 ಕೈಗಾರಿಕೋದ್ಯಮಿಗಳು 10 ಲಕ್ಷಕ್ಕಿಂತ ಕಡಿಮೆ ಸಾಲವನ್ನು ಪಡೆಯುತ್ತಿದ್ದು, ಕೈಗಾರಿಕೋದ್ಯಮಗಳಿಗೆ ಕೈಗೆಟುಕುವ ಹಾಗೂ ಭರಿಸಲು ಸಾಧ್ಯವಾಗುವಂತೆ ಸಾಲ ಸೌಲಭ್ಯಗಳ ಅವಕಾಶವಿದೆ. ಈ ಬಾರಿಯ ಬಜೆಟ್​ನಲ್ಲಿಯೂ ಸಹ ಸೂಕ್ಷ್ಮ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚು ಅಲೊಕೇಟ್ ಮಾಡಲಾಗಿದೆ. ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೋದ್ಯಮಿಗಳನ್ನು ಗುರುತಿಸುವುದು, ಸಾಲ ಸೌಲಭ್ಯ ನೀಡುವುದು ಹಾಗೂ ಉತ್ತೇಜಿಸುವುದು ನಮ್ಮ ಉದ್ದೇಶವಾಗಿದೆ ಎಂದರು.

ಭಾರತದ ಸಣ್ಣ ಕೈಗಾರಿಕೆ ಅಭಿವೃದ್ಧಿ ಬ್ಯಾಂಕ್​ನ (SIDBI) ಮುಖ್ಯ ಪ್ರಧಾನ ವ್ಯವಸ್ಥಾಪಕರು ಹಾಗೂ ಪ್ರಾದೇಶಿಕ ಮುಖ್ಯಸ್ಥರು ಆದ ಸಾತ್ಯಕಿ ರಸ್ತೋಗಿ ಅವರು ಮಾತನಾಡಿ, ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಎಲ್ಲಾ ಜವಾಬ್ದಾರಿ ಒಬ್ಬ ವ್ಯಕ್ತಿ ಮೇಲೆ ಕೇಂದ್ರೀಕೃತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿಯನ್ನು ಕಾಣಬಹುದು. ಜಾಗತಿಕ ಮಟ್ಟದ ಜಿಡಿಪಿಗೆ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳು ಶೇ.60 ರಷ್ಟು ಕೊಡುಗೆ ನೀಡಿವೆ. ಭಾರತದಲ್ಲಿ ದೇಶದ ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುತ್ತಿದ್ದು, ಇದನ್ನು ಉತ್ತಮಗೊಳಿಸುವಲ್ಲಿ ಎಂಎಸ್ಎಂಇಗಳಿಗೆ ಮತ್ತಷ್ಟು ಪ್ರೋತ್ಸಾಹ ಉತ್ತೇಜನ ಹಾಗೂ ಹಣಕಾಸಿನ ನೆರವು ನೀಡಬೇಕಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಸಿಯಾದ ಅಧ್ಯಕ್ಷರಾದ ಸಿಎ ಶಶಿಧರ ಶೆಟ್ಟಿ, ಎಂಎಸ್‌ಎಂಗಿ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿಯ ಜಂಟಿ ನಿರ್ದೇಶಕರು ಹಾಗೂ ಮುಖ್ಯಸ್ಥರಾದ ಡಾ. ಕೆ ಸಾಕ್ರೆಟಿಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಟಿ ದಿನೇಶ್, ಎಸ್​ಐಡಿಬಿಐ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಆಲ್ಬರ್ಟ್ ಜೆರ್ಮಿ ಸೇರಿದಂತೆ ಮೈಸೂರು ಇಂಡಸ್ಟ್ರೀಸ್ ಅಸೋಸಿಯೇಷನ್, ಹೆಬ್ಬಾಳ್ ಇಂಡಸ್ಟ್ರಿಯಲ್ ಎಸ್ಟೇಟ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್, ಕೆ ಎ ಡಿ ಬಿ ಇಂಡಸ್ಟ್ರಿಯಲ್ ಏರಿಯಾ ಮ್ಯಾನುಫ್ಯಾಕ್ಚರಿಸನ್, ಮೈಸೂರು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಕಾತ್ಕಿ ಇಂಡಸ್ಟ್ರಿಯಲ್ ಅಸೋಸಿಯೇಷನ್, ಮೈಸೂರು ಪ್ರಿಂಟರ್ಸ್ ಕ್ಲಸ್ಟರ್ ಹಾಗೂ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕೌನ್ಸಿಲ್ ನ ಸದಸ್ಯರು ಭಾಗವಹಿಸಿದ್ದರು.

ಇದನ್ನೂ ಓದಿ:ನಮ್ಮ ಮೆಟ್ರೋ ಹಳದಿ ಮಾರ್ಗದ ಕಾರ್ಯಾಚರಣೆ ನಿಗದಿತ ಸಮಯಕ್ಕಿಂತ ತಡವಾಗಿ ಆರಂಭ?

ABOUT THE AUTHOR

...view details