ಮೈಸೂರು: ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹುಣಸೂರಿನ ನಗರಸಭೆ ವ್ಯಾಪ್ತಿಯಲ್ಲಿರುವ ಅಂಗಡಿಗಳ ವ್ಯಾಪಾರ ವಹಿವಾಟಿನ ಸಮಯವನ್ನು ಕಡಿತಗೊಳಿಸಲಾಗಿದೆ.
3 ಗಂಟೆಯ ನಂತರ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿ: ಶಾಸಕ ಮಂಜುನಾಥ್ ಮನವಿ
ವೇಗವಾಗಿ ಹರಡುತ್ತಿರುವ ಕೊರೊನಾ ತಡೆಗಟ್ಟುವ ಸಲುವಾಗಿ ಜೂ. 26ರಿಂದ ಮಧ್ಯಾಹ್ನ 3 ಗಂಟೆಯ ನಂತರ ವ್ಯಾಪಾರ ವಹಿವಾಟನ್ನು ಸ್ವ-ಇಚ್ಛೆಯಿಂದ ಸ್ಥಗಿತಗೊಳಿಸಿ ಎಂದು ವರ್ತಕರಿಗೆ ಶಾಸಕ ಹೆಚ್.ಪಿ.ಮಂಜುನಾಥ್ ಮನವಿ ಮಾಡಿದರು.
ಹುಣಸೂರು ನಗರಸಭೆ ವ್ಯಾಪ್ತಿಗೆ ಸಂಬಂಧಪಟ್ಟಂತೆ ಎಲ್ಲಾ ವರ್ತಕ ಸಂಘದ ಪ್ರತಿನಿಧಿಗಳ ಜೊತೆ ನಗರಸಭೆ ಸಭಾಂಗಣದಲ್ಲಿ ಚರ್ಚೆ ನಡೆಸಿ ನಂತರ ಮಾತನಾಡಿದ ಶಾಸಕ ಹೆಚ್.ಪಿ.ಮಂಜುನಾಥ್, ವೇಗವಾಗಿ ಹರಡುತ್ತಿರುವ ಕೊರೊನಾ ತಡೆಗಟ್ಟುವ ವಿಚಾರವಾಗಿ ತಮ್ಮ ಸಹಕಾರ ಅತ್ಯಗತ್ಯ. ಹಾಗಾಗಿ ವರ್ತಕರು ತಾಲೂಕು ಆಡಳಿತದ ಜೊತೆ ಸ್ಪಂದಿಸಬೇಕು. ಜೂ. 26ರಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಿ. 3 ಗಂಟೆಯ ನಂತರ ಸ್ವ-ಇಚ್ಛೆಯಿಂದ ಎಲ್ಲಾ ವ್ಯಾಪಾರವನ್ನು ಸ್ಥಗಿತಗೊಳಿಸಿ ಎಂದು ಮನವಿ ಮಾಡಿದರು.
ಈ ಹಿಂದೆ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶ ಇತ್ತು. ಆದರೆ ಜೂ. 26ರಿಂದ ಬೆಳಿಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಮಾತ್ರ ಎಲ್ಲಾ ವ್ಯಾಪಾರ ವಹಿವಾಟು ನಡೆಸುವಂತೆ ಶಾಸಕರು ಮನವಿ ಮಾಡಿದ್ದಾರೆ.