ಮೈಸೂರು: ಇಸ್ತ್ರಿ ಮಾಡುತ್ತಿದ್ದ ವೇಳೆ ಉಂಟಾದ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿ, ವ್ಯಕ್ತಿಯೊಬ್ಬರಿಗೆ ಸುಟ್ಟಗಾಯಗಳಾಗಿರುವ ಘಟನೆ ಜಿಲ್ಲೆಯ ಹುಣಸೂರು ನಗರದ ಸ್ಟೋರ್ ಬೀದಿಯಲ್ಲಿ ನಡೆದಿದೆ. ಅವಘಡದಲ್ಲಿ ಸ್ಟೋರ್ ಬೀದಿ ನಿವಾಸಿ ಶೇಖರ್ ಅವರಿಗೆ ಸುಟ್ಟಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶೇಖರ್ ಅವರು ಇಸ್ತ್ರಿ ಮಾಡಿ ಜೀವನ ನಡೆಸುತ್ತಿದ್ದರು. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಬಟ್ಟೆಗಳು ಬಂದಿದ್ದರಿಂದ ಅಂಗಡಿಯಿಂದ ಮನೆಗೆ ತಂದು ಇಸ್ತ್ರಿ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಬಟ್ಟೆಗೆ ಬೆಂಕಿ ಹತ್ತಿದ್ದು, ಬಟ್ಟೆಯೆಲ್ಲ ಸುಟ್ಟು ಹೋಗಿದೆ. ಜೊತೆಗೆ ಮನೆಯಲ್ಲಿದ್ದ ಟಿವಿ, ವಾಷಿಂಗ್ ಮಷಿನ್ ಸೇರಿದಂತೆ ಹಲವು ವಸ್ತಗಳು ಬೆಂಕಿಗಾಹುತಿಯಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಗಾಯಾಳು ಶೇಖರ್ ಮಗಳು, ನಾವು ಇಸ್ತ್ರಿ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ವಿದ್ಯುತ್ ಶಾರ್ಟ್ ಸಕ್ಯೂ೯ಟ್ನಿಂದಾಗಿ ಸಂಪೂರ್ಣ ಮನೆಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಹೋಗಿವೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರು ಸೂಕ್ತ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು. ಹುಣಸೂರು ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಚಿಲ್ಕುಂದ ರವಿ ಮಾತನಾಡಿ, ಕಡು ಬಡವರಾಗಿರುವ ಶೇಖರ್ ಅವರು ಇಸ್ತ್ರಿ ಹಾಕಿ ಜೀವನ ಸಾಗಿಸುತ್ತಿದ್ದಾರೆ. ಶಾರ್ಟ್ ಸರ್ಕ್ಯೂಟ್‌ನಿಂದ ಅಪಾರ ನಷ್ಟ ಉಂಟಾಗಿದ್ದು, ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.