ಮೈಸೂರು: ಶಿವಮೊಗ್ಗದಲ್ಲಿ ಯುವಕನನ್ನ ಕೊಲೆ ಮಾಡಿದವರನ್ನ ಗಲ್ಲಿಗೇರಿಸಬೇಕು, ಹಾಗೂ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಇಂದು ನಗರದ ಆರು ಗೇಟ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನಡೆದಿರುವ ಕೊಲೆ ಪ್ರಕರಣ ಅಪಾಯಕಾರಿಯಾದ ಬೆಳವಣಿಗೆ. ಪೊಲೀಸರು ಎಚ್ಚರ ವಹಿಸಬೇಕಿತ್ತು. ಅವರು ಎಚ್ಚರ ವಹಿಸಿದ್ದರೇ ಈ ಘಟನೆ ನಡೆಯುತ್ತಿರಲಿಲ್ಲ. ಕೊಲೆ ಮಾಡಿರುವವರು ಯಾರೇ ಆಗಿರಲಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು, ಜೊತೆಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಜೊತೆಗೆ ಮೃತಪಟ್ಟ ಹರ್ಷ ಅವರ ಕುಟುಂಬಕ್ಕೆ ಸರ್ಕಾರದಿಂದ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಶಿವಮೊಗ್ಗದಲ್ಲಿ ನಡೆಯುತ್ತಿರುವ ಗಲಭೆಗೆ ರಾಜಕಾರಣಿಗಳ ಕುಮ್ಮಕ್ಕು ಇದೆಯಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಜಕಾರಣಿಗಳು, ಪೊಲೀಸರ ಎದುರೇ ಅಂಗಡಿಗೆ ಕಲ್ಲು ಹೊಡೆಯುವುದು, ಬೆಂಕಿ ಹಚ್ಚುವುದು, ಗಲಭೆ ಮಾಡುವುದು ತಪ್ಪು. ಇದರಿಂದ ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತದೆ. ಗಲಭೆಯನ್ನು ರಾಜಕಾರಣಿಗಳು ನೋಡಿಕೊಂಡು ನಿಂತಿದ್ದಾರೆ, ಇದು ಅಕ್ಷಮ್ಯ ಅಪರಾಧ ಎಂದರು. ಈ ಗಲಭೆಯನ್ನು ತಡೆಯಲು ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಅವರು ಶಿಸ್ತಿನ ಕ್ರಮ ತೆಗೆದುಕೊಂಡಿದ್ದರೆ ಇಷ್ಟು ದೊಡ್ಡ ಬೆಳವಣಿಗೆಯಾಗುತ್ತಿರಲಿಲ್ಲ. ಜೊತೆಗೆ ಗಲಭೆ ನಿಯಂತ್ರಿಸುವಲ್ಲಿ ಗೃಹ ಸಚಿವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ವಾಟಾಳ್ ಆರೋಪಿಸಿದರು.