ಮೈಸೂರು:ಶಿಲ್ಪಿ ಅಗರ್ವಾಲ್ ನೈಋತ್ಯ ರೈಲ್ವೆಯ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಹುದ್ದೆಯನ್ನು ಅಲಂಕರಿಸಿದ 2ನೇ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಹೌದು, ಹಿಂದೆ ಡಿಆರ್ಎಂ ಹುದ್ದೆಗೆ ರಾಹುಲ್ ಅಗರ್ವಾಲ್ ಬರುವ ಮುನ್ನ ಅಪರ್ಣಾ ಗಾರ್ಗ್ ಡಿಆರ್ಎಂ ಹುದ್ದೆ ನಿಭಾಯಿಸಿದ್ದರು. ಆ ಮೂಲಕ ಮೈಸೂರು ರೈಲ್ವೆ ವಿಭಾಗೀಯ ಡಿಆರ್ಎಂ (ಡಿವಿಷನಲ್ ರೈಲ್ವೆ ಮ್ಯಾನೇಜರ್) ಹುದ್ದೆಗೆ ಏರಿದ ಮೊದಲ ಮಹಿಳೆಯಾಗಿದ್ದರು. ಈಗ ಅದೇ ಹುದ್ದೆಗೆ ಮಹಿಳೆಯನ್ನೇ ನೇಮಕ ಮಾಡಲಾಗಿದೆ.
ನೈಋತ್ಯ ರೈಲ್ವೆಯ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಶಿಲ್ಪಿ ಅಗರ್ವಾಲ್ ಅವರು ರಾಹುಲ್ ಅಗರ್ವಾಲ್ ಅವರಿಂದ ಅಧಿಕಾರ ವಹಿಸಿಕೊಂಡರು. ಶಿಲ್ಪಿ ಅಗರ್ವಾಲ್ ಅವರು, ಇದಕ್ಕೂ ಮೊದಲು ರೈಲ್ವೆ ಸಚಿವಾಲಯದ ನಿರ್ಮಾಣ ವಿಭಾಗವಾದ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (ಆರ್ವಿಎನ್ಎಲ್)ನ ಯೋಜನೆಯ ಅನುಷ್ಠಾನ ಮತ್ತು ಸಾರಿಗೆ ಮೂಲಸೌಕರ್ಯ ಅಭಿವೃದ್ಧಿ (ಹಣಕಾಸು) ವಿಭಾಗದಲ್ಲಿ ಸಮೂಹ ಪ್ರಧಾನ ವ್ಯವಸ್ಥಾಪಕರಾಗಿದ್ದರು.
ವಿವಿಧ ಹುದ್ದೆಗಳಲ್ಲಿ ಸೇವೆ: ಇವರು ಭಾರತೀಯ ರೈಲ್ವೆ ವಿತ್ತೀಯ ಸೇವೆಯ(ಐಆರ್ಎಎಸ್) 1993ರ ಬ್ಯಾಚ್ಗೆ ಸೇರಿದವರು. ಲಕ್ನೋ ವಿಶ್ವ ವಿದ್ಯಾಲಯದಿಂದ ಕಲೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಮಾಜ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಜತೆಗೆ ಭಾರತೀಯ ರೈಲ್ವೆಯಲ್ಲಿ ಸುಮಾರು ಮೂರು ದಶಕಗಳ ಅನುಭವವನ್ನು ಹೊಂದಿದ್ದಾರೆ. ಉತ್ತರ ರೈಲ್ವೆ ಮತ್ತು ರೈಲ್ವೆ ಮಂಡಳಿಯ ಹಲವಾರು ಇಲಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ತಮ್ಮ ಸುದೀರ್ಘ ಮತ್ತು ಉತ್ತಮ ವೃತ್ತಿ ಜೀವನದ ಅವಧಿಯಲ್ಲಿ ಅವರು, ಭಾರತೀಯ ರೈಲ್ವೆಯ ಬಹುತೇಕ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಿರ್ಮಾಣ, ಸಂಚಾರ, ಭಂಡಾರ, ಸಿಬ್ಬಂದಿ ಮತ್ತು ಆಡಳಿತ ಕ್ಷೇತ್ರಗಳಲ್ಲಿ ವಿತ್ತೀಯ ಖಾತೆಯ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.