ಮೈಸೂರು: ಶರನ್ನವರಾತ್ರಿ ಎಂಬುದು ಶಕ್ತಿ ದೇವತೆಯ ಆರಾಧನೆಗೆ ಬಹಳ ಸೂಕ್ತವಾದ ದಿನ. ಈ ದಿನದಂದು ಶಕ್ತಿದೇವತೆಯನ್ನು ಪೂಜಿಸಿದರೆ ವಿಶೇಷ ಫಲಗಳು ದೊರೆಯುತ್ತವೆ ಎಂದು ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಶಶಿಶೇಖರ್ ದೀಕ್ಷಿತ್ ಅವರು ಹೇಳಿದ್ದಾರೆ.
ಈಟಿವಿ ಭಾರತ್ ಜೊತೆಗೆ ಮಾತನಾಡಿದ ಅವರು, ನವರಾತ್ರಿ ಎಂಬುದು ಬಹಳ ವಿಶೇಷ ದಿನಗಳು. ಈ ದಿನಗಳಲ್ಲಿ ಶಕ್ತಿ ದೇವತೆಯ ಆರಾಧನೆ ಮಾಡುವುದು ಬಹಳ ವಿಶೇಷವಾಗಿದೆ. ಈ ದಿನಗಳಲ್ಲಿ ಶಕ್ತಿ ದೇವತೆಯನ್ನು ಆರಾಧನೆ ಮಾಡಿದರೆ ಇಷ್ಟಾರ್ಥ ಸಿದ್ದಿಯ ಜೊತೆಗೆ ವಿಶೇಷ ಫಲಗಳು ಲಭಿಸುತ್ತದೆ. ಆದ್ದರಿಂದಲೇ ನವರಾತ್ರಿ ಸಂದರ್ಭದಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಮಾಡಿದರೆ ಒಳಿತಾಗುತ್ತದೆ ಎಂದು ಹೇಳಿದರು.
ನವರಾತ್ರಿಯ ಸಂದರ್ಭದಲ್ಲಿ ತಾಯಿಗೆ ವಿಶೇಷ ಪೂಜೆ : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸಾಂಪ್ರದಾಯಿಕವಾಗಿ ಪೂಜೆ ನಡೆಯುವ ಪದ್ಧತಿಯು ರಾಜ ಮನೆತನದಲ್ಲೂ ನಡೆಸಿಕೊಂಡು ಬಂದಿದ್ದು, ಚಾಮುಂಡಿ ಬೆಟ್ಟದಲ್ಲಿ ಶರನ್ನವರಾತ್ರಿಯಲ್ಲಿ ನಡೆಯುವ ಪೂಜೆಗೂ, ಅರಮನೆ ಒಳಗೆ ನಡೆಯುವ ಪೂಜಾ ಕೈಂಕರ್ಯಗಳು ಒಂದೇ ಆಗಿದೆ. ನವರಾತ್ರಿಯಂದು ಚಾಮುಂಡಿ ಬೆಟ್ಟದಲ್ಲಿ, ತಾಯಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ನಡೆಯುತ್ತದೆ. ಈ ಸಂದರ್ಭದಲ್ಲಿ ಪೂಜೆ ಮಾಡಿದರೆ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.
ನವರಾತ್ರಿಯಲ್ಲಿ ಶಕ್ತಿದೇವತೆ ಪೂಜೆ ಏಕೆ ಮಾಡುತ್ತಾರೆ : ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರ ವಿಶೇಷ ಸಂದರ್ಶನ ಕಳೆದ 2 ವರ್ಷಗಳಿಂದ ಕೊರೊನ ಹಿನ್ನಲೆಯಲ್ಲಿ ಸರಳವಾಗಿ ದಸರಾ ಆಚರಣೆ ನಡೆದಿದ್ದು, ಈ ವರ್ಷ ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಆಗಮಿಸುತ್ತಿರುವುದು ಬಹಳ ವಿಶೇಷವಾಗಿದೆ ಎಂದು ಹೇಳಿದರು.
ನವರಾತ್ರಿಯ ಪೂಜೆಯಲ್ಲಿ ವಿಶೇಷತೆಗಳು : ಶಕ್ತಿ ದೇವತೆಗೆ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡುವುದು ನವರಾತ್ರಿಯ ಸಂಕಲ್ಪವಾಗಿದ್ದು, ಮನೆಯಲ್ಲಿ ಚಿಣ್ಣರೆಲ್ಲ ಒಂದುಗೂಡಿಸಿ ಗೊಂಬೆ ಕೂರಿಸುವುದು, ಕಳಸ ಸ್ಥಾಪನೆ ಮಾಡುವುದು, ಸಂಜೆ ಸುಮಂಗಲಿಯರಿಗೆ ಕುಂಕುಮ ನೀಡುವುದು ನವರಾತ್ರಿಯ ವಿಶೇಷವಾಗಿದೆ. ಈ ಸಂದರ್ಭದಲ್ಲಿ ಚಾಮುಂಡೇಶ್ವರಿಗೆ ವಿಶೇಷವಾಗಿ ಅಲಂಕಾರ ಮಾಡುವುದು ವಾಡಿಕೆ.
ವಿಜಯದಶಮಿ ಹಿನ್ನಲೆ : ಇನ್ನು ವಿಜಯದಶಮಿಯ ಹಿನ್ನೆಲೆಯೆಂದರೆ ನವರಾತ್ರಿಯ ವಿಜಯದಶಮಿಯ ದಿನ ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ಬಳಿಕ ತಾವು ಗೆದ್ದಿರುವ ಆಯುಧಗಳಿಗೆ ಪೂಜೆ ಮಾಡಿ ವಿಜಯದಶಮಿ ಆಚರಣೆ ಮಾಡುತ್ತಾರೆ ಎಂದು ಹೇಳಿದರು. ಮೊದಲು ಹಂಪಿಯಲ್ಲಿ ಆರಂಭವಾದ ವಿಜಯದಶಮಿ ನಂತರ ಮೈಸೂರು ರಾಜರು ಶ್ರೀರಂಗಪಟ್ಟಣದಲ್ಲಿ ಆಚರಿಸುತ್ತಾ ಬಂದಿದ್ದರು. ಅನಂತರ ಇಂದಿಗೂ ಮೈಸೂರು ರಾಜರು ಅದೇ ಸಂಪ್ರದಾಯವನ್ನು ಅರಮನೆಯಲ್ಲಿ ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ತಾಯಿಗೆ ನಡೆಯುವ ಸಾಂಪ್ರದಾಯಿಕ ಪೂಜೆಗಳಂತೆಯೇ ಅರಮನೆಯಲ್ಲೂ ನಡೆಯುತ್ತದೆ. ಅರಮನೆಯಲ್ಲಿ ರತ್ನಖಚಿತ ಸಿಂಹಾಸನದಲ್ಲಿ ದರ್ಬಾರ್ ನಡೆಯುವ ರೀತಿಯಲ್ಲಿ, ಚಾಮುಂಡಿ ಬೆಟ್ಟದಲ್ಲೂ ಚಾಮುಂಡಿ ತಾಯಿಗೆ ದರ್ಬಾರ್ ನಡೆಯುತ್ತದೆ.
ನವರಾತ್ರಿಯಂದು ಶಕ್ತಿದೇವತೆಗೆ ವಿವಿಧ ಅಲಂಕಾರ: ಎಲ್ಲಕ್ಕಿಂತ ಮುಖ್ಯವಾಗಿ ನವರಾತ್ರಿಯ 9 ದಿನಗಳು ಶಕ್ತಿ ದೇವತೆಗೆ 9 ವಿವಿಧ ಅಲಂಕಾರಗಳನ್ನು ಮಾಡಿ ಪೂಜೆ ಸಲ್ಲಿಸಿದರೆ ಕಷ್ಟ ಕಾರ್ಪಣ್ಯಗಳು ದೂರವಾಗಿ ಇಷ್ಟಾರ್ಥ ಸಿದ್ದಿಯಾಗುತ್ತದೆ ಎಂಬುದು ನವರಾತ್ರಿಯ ಶಕ್ತಿ ದೇವತೆ ಪೂಜೆಯ ಹಿನ್ನೆಲೆಯಾಗಿದೆ ಎಂದು ಅರ್ಚಕರು ಹೇಳುತ್ತಾರೆ.
ಇದನ್ನೂ ಓದಿ :ಝಗಮಗಿಸುವ ವಿದ್ಯುತ್ ದೀಪಾಲಂಕಾರದಲ್ಲಿ ಹೆಜ್ಜೆ ಹಾಕಿದ ಗಜಪಡೆ