ಮೈಸೂರು:ರಾಜ್ಯದಲ್ಲಿ ಒಂದು ಆದೇಶ, ಮೈಸೂರು ಜಿಲ್ಲೆಗೆ ಮತ್ತೊಂದು ಆದೇಶ ಎಂದು ಬಿಜೆಪಿ ಶಾಸಕ ನಾಗೇಂದ್ರ ಪತ್ರಕರ್ತರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕೊರೊನ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಇಂದಿನಿಂದ ಮೇ 4ರವರೆಗೆ ಸರ್ಕಾರ ಆದೇಶವನ್ನು ಹೊರಡಿಸಿದ್ದು, ರಾತ್ರಿ ಸಮಯದಲ್ಲಿ ಮಾತ್ರ ಕರ್ಫ್ಯೂ ಹಾಗೂ ವಾರಾಂತ್ಯದಲ್ಲಿ ಎರಡು ದಿನ ಪೂರ್ಣ ಪ್ರಮಾಣದಲ್ಲಿ ಕರ್ಫ್ಯೂ ಇರಲಿದೆ. ಆದರೆ ಮೈಸೂರಿನಲ್ಲಿ ಹಗಲಿನಲ್ಲಿ ಬಟ್ಟೆ ಅಂಗಡಿ, ಚಿನ್ನದ ಅಂಗಡಿ ಹಾಗೂ ಇತರ ಅಂಗಡಿಗಳನ್ನು ಮುಚ್ಚಿಸುತ್ತಿರುವುದು ಸರಿಯಲ್ಲ ಎಂದರು.
ಈಗ ತಾನೇ ಲಾಕ್ಡೌನ್ನಿಂದಾಗಿ ಜನರು ಚೇತರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಈ ರೀತಿ ರಾಜ್ಯಕ್ಕೆ ಒಂದು ಕಾನೂನು, ಮೈಸೂರಿಗೆ ಒಂದು ಕಾನೂನು ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಸಚಿವರು ಮಧ್ಯಪ್ರವೇಶ ಮಾಡಿ ಈ ಆದೇಶವನ್ನು ಮರುಪರಿಶೀಲನೆ ಮಾಡಬೇಕೆಂದು ಶಾಸಕರು ಆಗ್ರಹಿಸಿದರು.
ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಬಗ್ಗೆ ನನಗೆ ಯಾವುದೇ ರೀತಿ ಅಸಮಾಧಾನ ಇಲ್ಲ. ಆದರೆ ಕ್ಷೇತ್ರಕ್ಕೆ ಸಚಿವರು ಬರುವ ಬಗ್ಗೆ ಸ್ಥಳೀಯ ಶಾಸಕರಿಗೆ ಮಾಹಿತಿ ನೀಡಬೇಕೆಂದು ಕೇಳುತ್ತೇನೆ ಎಂದು ಇದೇ ಸಂದರ್ಭದಲ್ಲಿ ಶಾಸಕ ನಾಗೇಂದ್ರ ಸಚಿವರ ಭೇಟಿ ಬಗ್ಗೆ ಮಾಹಿತಿ ನೀಡದ ಆಪ್ತರ ಬಗ್ಗೆ ಅಸಮಾಧಾನಗೊಂಡಿದಕ್ಕೆ ವಿವರಣೆ ನೀಡಿದರು.