ಕರ್ನಾಟಕ

karnataka

ETV Bharat / state

ಜನಸಾಮಾನ್ಯರಿಗೆ ತೊಂದರೆಯಾಗದಂತೆ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ: ಸಿಎಂ ಸಿದ್ದರಾಮಯ್ಯ - ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ

ಸಾಮಾನ್ಯ ಜನರ ಹಕ್ಕನ್ನು ರಕ್ಷಿಸಲು ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

CM Siddaramaiah
ಮುಖ್ಯಮಂತ್ರಿ ಸಿದ್ದರಾಮಯ್ಯ

By ETV Bharat Karnataka Team

Published : Sep 26, 2023, 1:18 PM IST

Updated : Sep 26, 2023, 4:09 PM IST

ಜನಸಾಮಾನ್ಯರಿಗೆ ತೊಂದರೆಯಾಗದಂತೆ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ: ಸಿಎಂ ಸಿದ್ದರಾಮಯ್ಯ

ಮೈಸೂರು:ಪ್ರತಿಭಟನೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಪ್ರತಿಭಟನೆಯಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು. ಹಾಗಾಗಿ ಬಂದ್​ನಿಂದ ಜನಸಾಮಾನ್ಯರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕಾಗಿ 144 ಸೆಕ್ಷನ್ ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿಂದು ಹೇಳಿಕೆ ನೀಡಿದರು.

ಎರಡು ದಿನಗಳ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಪ್ರವಾಸದ ಹಿನ್ನೆಲೆಯಲ್ಲಿ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ, ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಪ್ರತಿಭಟನೆ ಹೇಗೆ ಸಂವಿಧಾನಾತ್ಮಕ ಹಕ್ಕೋ ಅದೇ ರೀತಿ ಸಾಮಾನ್ಯ ಜನರಿಗೂ ಹಕ್ಕಿರುತ್ತದೆ. ಅವರ ಹಕ್ಕಿಗೆ ಯಾವಾಗಲೂ ಧಕ್ಕೆ ತರಬಾರದು. ಆ ದೃಷ್ಟಿಯಿಂದ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದೇವೆ. ಆ ಮೂಲಕ ಜನರ ಹಕ್ಕನ್ನು ರಕ್ಷಿಸುವ ಕೆಲಸವನ್ನು ಮಾಡಿದ್ದೇವೆ. ಇದು ಸರ್ಕಾರದ ಕರ್ತವ್ಯ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡರು.

ಪ್ರಧಾನಿ ಮಧ್ಯಸ್ಥಿಕೆ ವಹಿಸಲಿ:ಕಾವೇರಿ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನ ಮಂತ್ರಿ ಮಧ್ಯಸ್ಥಿಕೆ ವಹಿಸಬೇಕು. ಕೇಂದ್ರದಿಂದ ತಜ್ಞರ ತಂಡ ಬಂದು ವಸ್ತುಸ್ಥಿತಿಯನ್ನು ಅಧ್ಯಯನ ಮಾಡಲಿ. ಈ ಬಗ್ಗೆ ನಾನು ಎರಡು ಬಾರಿ ಕೇಂದ್ರಕ್ಕೆ ಕೇಳಿದ್ದೇನೆ. ಈಗ ದೇವೇಗೌಡರು ಪತ್ರ ಬರೆದಿದ್ದಾರೆ. ಈಗಲಾದರೂ ಕೇಂದ್ರ ತಂಡ ಬರಲಿ. ಯಾಕೆ ಕೇಂದ್ರ ತಂಡ ಬರುತ್ತಿಲ್ಲ ಎಂದು ಬಿಜೆಪಿಯವರು ಹೇಳಲಿ. ಬಿಜೆಪಿಯವರು ಹಾದಿಬೀದಿಯಲ್ಲಿ ಪ್ರತಿಭಟನೆ ಮಾಡುವುದನ್ನು ಬಿಟ್ಟು, ಕೇಂದ್ರದಿಂದ ತಜ್ಞರ ತಂಡ ಕರೆಸಲಿ ಎಂದರು.

ಕಾವೇರಿ ವಿಚಾರವನ್ನು ಕೋರ್ಟ್ ಮಧ್ಯಸ್ಥಿಕೆ ಇಲ್ಲದೆ, ಎರಡು ರಾಜ್ಯಗಳು ಕೂತು ಮಾತುಕತೆ ಮೂಲಕ ಬಗೆಹರಿಸಲು ನಾವು ಸಿದ್ಧರಿದ್ದೇವೆ. ಇಂತಹ ಪ್ರಕರಣಗಳನ್ನು ನ್ಯಾಯಾಲಯದಿಂದ ಹೊರಗೆ ಬಗೆಹರಿಸಿಕೊಳ್ಳುವುದು ಸೂಕ್ತ. ಕಾವೇರಿ ವಿಚಾರದಲ್ಲಿ ದೇವೇಗೌಡರ ಪತ್ರವನ್ನು ಸ್ವಾಗತಿಸುತ್ತೇನೆ. ಆದರೆ ರಾಜ್ಯ ಸರ್ಕಾರ ಕಾವೇರಿ ವಿಚಾರವನ್ನು ಬಗೆಹರಿಸುವಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ ಎಂಬ ವಿಷಯವನ್ನು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿರುವುದನ್ನು ನಾನು ಒಪ್ಪುವುದಿಲ್ಲ. ಎಲ್ಲ ಹಂತದಲ್ಲೂ ನಾಡಿನ ಜನರ ರಕ್ಷಣೆಗೆ ಬದ್ಧವಾಗಿದ್ದೇವೆ. ಕಾನೂನು ತಜ್ಞರು ಸರಿಯಾಗಿ ವಾದ ಮಾಡಲಿಲ್ಲ ಎಂಬ ಆರೋಪ ಸುಳ್ಳು. ಹಿಂದಿರುಗಿ ಎಲ್ಲಾ ಸರ್ಕಾರ ಇದ್ದಾಗಲೂ ಇದೇ ಲೀಗಲ್ ಟೀಂ ವಾದ ಮಂಡಿಸಿತ್ತು. ಕಾನೂನು ತಜ್ಞರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ರಾಜ್ಯದ ಪರವಾಗಿ ಕಾನೂನು ತಜ್ಞರು ಸರಿಯಾದ ವಾದ ಮಂಡಿಸಲಿಲ್ಲ ಎಂಬುದು ಅರ್ಥವಿಲ್ಲದ ಮಾತು ಎಂದು ಹೇಳಿದರು.

ಬಿಜೆಪಿಯಿಂದ ಮಂಡ್ಯದಲ್ಲಿ ಚಡ್ಡಿ ಚಳವಳಿ:ಮಂಡ್ಯದಲ್ಲಿ ಬಿಜೆಪಿಯವರು ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಚಡ್ಡಿ ಚಳವಳಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಮೊದಲಿನಿಂದಲೂ ಬಿಜೆಪಿಯವರನ್ನು ಚಡ್ಡಿಗಳು ಎಂದು ಕರೆಯುತ್ತಿದ್ದೆ. ಈಗ ಅವರು ಚಡ್ಡಿ ಚಳುವಳಿ ಮಾಡಿದ್ದಾರೆ. ಅವರು ಮಾಡಲಿ ಎಂದು ಸಿಎಂ ತಿರುಗೇಟು ನೀಡಿದರು.

ರಾಜ್ಯದ ಕಾಂಗ್ರೆಸ್ ಡಿಎಂಕೆಗೆ ಬಿ ಟೀಂ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಎಐಡಿಎಂಕೆ ಬಿಜೆಪಿ ಜೊತೆ ಇತ್ತಲ್ಲ. ಅದು ಯಾವ ಟೀಂ, ಸುಮ್ಮನೆ ರಾಜಕೀಯ ಕಾರಣಕ್ಕೆ ಏನೇನೋ ಹೇಳಬಾರದು. ಸುಮ್ಮನೆ ಬಿ ಟೀಂ, ಎ ಟೀಂ ಎಂಬ ಹೇಳಿಕೆ ನೀಡಬಾರದು ಎಂದು ಹೇಳಿದರು.

ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬುದು ಸುಳ್ಳು:ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬುದು ಸುಳ್ಳು. ನಾನೇ ಎರಡು ಬಾರಿ ಸಿಎಂ ಆಗಿದ್ದೇನೆ, ಈಗ ಗಟ್ಟಿಯಾಗಿದ್ದೇನೆ, ಮುಂದೆ ಗಟ್ಟಿಯಾಗಿಯೂ ಇರುತ್ತೇನೆ. ನೀವು ನನ್ನನ್ನು ವೀಕ್ ಮಾಡಲು ಯತ್ನಿಸುತ್ತಿದ್ದೀರಿ. ಚಾಮರಾಜನಗರಕ್ಕೆ ಹೋದರೆ ಅಧಿಕಾರ ಹೋಗುತ್ತದೆ ಎಂಬುದು ಸುಳ್ಳು. ಚಾಮರಾಜನಗರಕ್ಕೆ ಹೋದರೆ ಮತ್ತೆ ಅಧಿಕಾರ ಗಟ್ಟಿಯಾಗಿರುತ್ತದೆ ಎಂಬುದಕ್ಕೆ ನಾನು ಹಾಗೂ ಮಹದೇವಪ್ಪ ಸಾಕ್ಷಿ ಎಂದು ವಿವರಣೆ ನೀಡಿದರು.

ಇದನ್ನೂ ಓದಿ:ಕಾವೇರಿ ಹೋರಾಟಗಾರರನ್ನು ರಾತ್ರೋರಾತ್ರಿ ಬಂಧಿಸಿರುವುದು ಕಾಂಗ್ರೆಸ್ ಸರ್ಕಾರದ ಕಿಡಿಗೇಡಿತನದ ಪರಮಾವಧಿ: ಹೆಚ್​​ಡಿಕೆ ಕಿಡಿ

Last Updated : Sep 26, 2023, 4:09 PM IST

ABOUT THE AUTHOR

...view details