ಕರ್ನಾಟಕ

karnataka

ETV Bharat / state

2ಬಿ ಮೀಸಲಾತಿ ರದ್ದು: ಸ್ವಾಮೀಜಿಗಳ ಮಧ್ಯೆ ಪ್ರವೇಶಕ್ಕೆ ಎಸ್‍ಡಿಪಿಐ ಒತ್ತಾಯ - 2B reservation Cancellation

ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಸುತ್ತೂರು ಸ್ವಾಮೀಜಿಗಳು ಮತ್ತು ನಿರ್ಮಲಾನಂದನಾಥ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿ ಮುಸ್ಲಿಂರಿಂದ ಕಿತ್ತು ಹಂಚಿರುವ ಮೀಸಲಾತಿಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದಾರೆ.

SDPI  President Abdul Majeed reaction on 2B  reservation Cancellation
2ಬಿ ಮೀಸಲಾತಿ ರದ್ದು: ಸ್ವಾಮೀಜಿಗಳ ಮದ್ಯ ಪ್ರವೇಶಕ್ಕೆ ಎಸ್‍ಡಿಪಿಐ ಒತ್ತಾಯ

By

Published : Mar 27, 2023, 8:23 PM IST

Updated : Mar 28, 2023, 1:08 PM IST

ಮೈಸೂರು: ರಾಜ್ಯದ ಬಡ ಮುಸ್ಲಿಂ ಸಮುದಾಯದ ಶೇಕಡಾ 4 ಮೀಸಲಾತಿಯನ್ನು ರದ್ದು ಮಾಡಿ, ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿರುವುದನ್ನು ಸುತ್ತೂರು ಶ್ರೀಗಳು ಹಾಗೂ ಆದಿ ಚುಂಚನಗಿರಿ ಶ್ರೀಗಳು ತಿರಸ್ಕರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಿಳುವಳಿಕೆ ಹೇಳಬೇಕು ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ವಿನಂತಿ ಮಾಡಿದ್ದಾರೆ.

ಮುಸ್ಲಿಂರಿಗೆ ವಿವಿಧ ರೀತಿಯಲ್ಲಿ ಸರ್ಕಾರದಿಂದ ಹಿಂಸೆ- ಅಬ್ದುಲ್​ ಮಜೀದ್​.. ಮುಸ್ಲಿಂ ಸಮುದಾಯವನ್ನು ಶಿಕ್ಷಣ ಮತ್ತು ಉದ್ಯೋಗದಿಂದ ದೂರವಿಡಲು ಬಿಜೆಪಿ ಸರ್ಕಾರ ಶೇ.4 (2ಬಿ)ಮೀಸಲಾತಿಯನ್ನು ರದ್ದು ಪಡಿಸಿರುವುದನ್ನು ಖಂಡಿಸಿ ಮೈಸೂರಿನ ಸಂತ ಫಿಲೋಮಿನಾ ಚರ್ಚ್ ವೃತ್ತದಲ್ಲಿ ಎಸ್‍ಡಿಪಿಐ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಮುಸ್ಲಿಂ ಸಮುದಾಯಕ್ಕೆ ನಿರಂತರವಾಗಿ ವಿವಿಧ ರೂಪದಲ್ಲಿ ಹಿಂಸೆ ನೀಡುತ್ತಾ ಬಂದಿದೆ ಎಂದು ಅಬ್ದುಲ್ ಮಜೀದ್ ಆರೋಪಿಸಿದರು.

ಹಿಜಾಬ್, ಹಲಾಲ್, ಎನ್‍ಆರ್​ಸಿ, ಬುರ್ಖಾ, ಬೀಫ್ ಬ್ಯಾನ್​, ತ್ರಿವಳಿ ತಲಾಖ್, ಕೊರೊನಾ ಮುಂತಾದ ವಿಚಾರಗಳನ್ನು ಮುಂದಿಟ್ಟು ಮುಸ್ಲಿಂ ಸಮುದಾಯವನ್ನು ಇತರೆ ಸಮುದಾಗಳೊಂದಿಗೆ ದೂರವಾಗುವಂತೆ ಮಾಡಿದೆ. ಕೇವಲ ರಾಜಕೀಯಕ್ಕಾಗಿ ಅಮಾಯಕರಾದ ಮುಸ್ಲಿಂರನ್ನು ಅಪರಾಧಿ ಸ್ಥಾನದಲ್ಲಿಡುವುದು ಯಾವ ನ್ಯಾಯ? ಈ ಕೂಡಲೇ ಸುತ್ತೂರು ಶ್ರೀಗಳು ಮತ್ತು ನಿರ್ಮಲಾನಂದನಾಥ ಸ್ವಾಮೀಜಿಗಳು ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರದ ಕಿವಿ ಹಿಂಡಬೇಕು ಹಾಗೂ ನಮ್ಮಿಂದ ಕಿತ್ತು ಹಂಚಿರುವ ಮೀಸಲಾತಿಯನ್ನು ನಯವಾಗಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪಿಎಸ್‍ಐ ನೇಮಕಾತಿಗೆ 80 ಲಕ್ಷ ಲಂಚ, ಪ್ರಾಧ್ಯಾಪಕರ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ, ಗುತ್ತಿಗೆದಾರರಿಂದ ಶೇ.40 ರಷ್ಟು ಲಂಚ, ಹೀಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆಜನರ ಬಳಿಮತ ಯಾಚನೆ ಮಾಡಲು ಯಾವುದೇ ವಿಷಯವಿಲ್ಲ ಆದ್ದರಿಂದ ಅವರು ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿ ಬಲಿಷ್ಠ ಕೋಮುಗಳಾದ ಒಕ್ಕಲಿಗರು ಮತ್ತು ಲಿಂಗಾಯತರನ್ನು ಮೆಚ್ಚಿಸಲು ಹೊರಟಿದೆ. ಇದೇ ಒಕ್ಕಲಿಗ ಸಮುದಾಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿಯದ್ದು ರಾಕ್ಷಸಿ ಪ್ರವೃತ್ತಿ ಎಂದು ಟೀಕಿಸಿದ್ದಾರೆ. ಹಾಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು.

ಇತಿಹಾಸ ಬಸವರಾಜ ಬೊಮ್ಮಾಯಿ ಅವರನ್ನು ಕ್ಷಮಿಸುವುದಿಲ್ಲ - ಅಬ್ದುಲ್ ಮಜೀದ್:ಮುಸ್ಲಿಂರನ್ನು ಉದ್ಯೋಗ ಮತ್ತು ಶಿಕ್ಷಣದಿಂದ ದೂರವಿಡಲು ಕಳೆದ 30 ವರ್ಷಗಳಿಂದ ರಾಜ್ಯದಲ್ಲಿ ಜಾರಿಯಲ್ಲಿದ್ದ 2ಬಿ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಏಕಾಏಕಿ ಕಿತ್ತುಕೊಂಡಿದೆ. ಬಡ ಮುಸ್ಲಿಂರ ತಟ್ಟೆಯಲ್ಲಿದ್ದ ಅನ್ನವನ್ನು ಕಿತ್ತು ಉಳ್ಳವರಿಗೆ ನೀಡಿದ್ದೀರಿ. ಇದು ಯಾವ ನ್ಯಾಯ? ಇತಿಹಾಸ ಬಸವರಾಜ ಬೊಮ್ಮಾಯಿ ಅವರನ್ನು ಕ್ಷಮಿಸುವುದಿಲ್ಲ. ನೀವು ನಿಜವಾದ ಬಸವಣ್ಣನ ಅನುಯಾಯಿಗಳಾಗಿದ್ದರೆ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ 1 ಕೋಟಿ ಗೂ ಹೆಚ್ಚಿದೆ. ಮುಸ್ಲಿಂ ಸಮುದಾಯದ ಸ್ಥಿತಿಗತಿ ಇಂದು ದಲಿತರಿಗಿಂತಲೂ ಶೋಚನೀಯವಾಗಿದೆ ಎಂದು ಇದುವರೆಗೂ ವಿವಿಧ ಆಯೋಗದ ಸಮಿತಿಗಳು ವರದಿ ನೀಡಿವೆ. 1953ರಲ್ಲಿ ನೇಮಕವಾದ ಕಾಕಾ ಕಾಳೇಕರ್ ಆಯೋಗದಿಂದ ಹಿಡಿದು ನಾಗಣ್ಣಗೌಡ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ, ಹಾವನೂರು ಆಯೋಗ, ಮಂಡಲ್ ಆಯೋಗ, ಭಕ್ಷಿ ಆಯೋಗ, ಸಾಚಾರ್ ಆಯೋಗ, ರಂಗನಾಥ ಮಿಶ್ರ ಆಯೋಗಗಳು ದೇಶದಲ್ಲಿನ ಮುಸ್ಲಿಂ ಸಮುದಾಯದ ಸ್ಥಿತಿ ಶೋಚನೀಯವಾಗಿದೆ ಎಂದು ವರದಿಗಳನ್ನು ನೀಡಿವೆ ಎಂದು ಹೇಳಿದರು.

ಅದರಲ್ಲೂ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನೇಮಕವಾಗಿದ್ದ ರಂಗನಾಥ ಮಿಶ್ರ ಆಯೋಗದ ವರದಿ ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ.10 ರಷ್ಟು ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿದೆ. ದುರದೃಷ್ಟವಶಾತ್ ಬೊಮ್ಮಾಯಿ ಸರ್ಕಾರ ನಮಗಿದ್ದ ಶೇ.4 ರಷ್ಟು ಮೀಸಲಾತಿಯನ್ನೂ ಸಹ ಕಸಿದುಕೊಂಡಿರುವುದು ಘೋರ ಅನ್ಯಾಯ. ಪ್ರತಿಭಟನೆಗಷ್ಟೇ ನಮ್ಮ ಹೋರಾಟ ನಿಲ್ಲುವುದಿಲ್ಲ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ. ಮುಸ್ಲಿಂ ಸಮುದಾಯದ ಬಂಧುಗಳು ಒಂದು ಹೊತ್ತಿನ ಊಟ ಬಿಟ್ಟರೂ ಪರವಾಗಿಲ್ಲ, ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಅಬ್ದುಲ್ ಮಜೀದ್ ಸಲಹೆ ನೀಡಿದರು.

ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಬೇಕು - ರಫತ್ ಖಾನ್:ಎಸ್‍ಡಿಪಿಐ ಮೈಸೂರು ಜಿಲ್ಲಾಧ್ಯಕ್ಷ ರಫತ್ ಖಾನ್ ಮಾತನಾಡಿ, ಈ ಬಿಜೆಪಿಗರು ನಿರಂತರವಾಗಿ ಮುಸ್ಲಿಂ ಸಮುದಾಯದ ಮೇಲೆ ವಿವಿಧ ರೀತಿಯ ಕಷ್ಟಗಳನ್ನು ಕೊಡುತ್ತಿದ್ದರೂ ಮುಸ್ಲಿಂ ಶಾಸಕರು ಸಮುದಾಯದ ಪರ ನಿಲ್ಲಲಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಇನ್ನು ಪ್ರತಿಭಟನೆಯಲ್ಲಿ ಎಸ್‍ಡಿಪಿಐ ಉಪಾಧ್ಯಕ್ಷ ಪುಟ್ಟನಂಜಯ್ಯ, ಮುಖಂಡರಾದ ಅಮ್ಜದ್ ಖಾನ್, ಮೌಲಾನಾ ನೂರುದ್ದೀನ್, ಕೌನೇನ್ ರಝಾ, ಶಫಿ, ಜೆಡಿಎಸ್​ ಮಹಿಳಾ ಘಟಕದ ಅಧ್ಯಕ್ಷೆ ಆಯೇಷಾ, ಮನ್ಸೂರ್ ಮುಂತಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ:2ಬಿ ಮೀಸಲಾತಿ ರದ್ದು.. ಕೊಪ್ಪಳದಲ್ಲಿ ಮುಸ್ಲಿಂ ಸಮುದಾಯದಿಂದ ಬೃಹತ್ ಪ್ರತಿಭಟನೆ

Last Updated : Mar 28, 2023, 1:08 PM IST

ABOUT THE AUTHOR

...view details