ಮೈಸೂರು: ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಿಂಗಂ ಅಲ್ಲ, ಮೈಸೂರು ಜನರನ್ನು ಮಂಗಂ ಮಾಡಲು ಹೊರಟ ಪ್ರಚಾರಪ್ರಿಯೆ ಎಂದು ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ನಡೆಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತನ್ನ ವರ್ಗಾವಣೆಗೆ ಭೂ ಮಾಫಿಯಾ ಕಾರಣ ಎಂಬ ಹೇಳಿಕೆ ನೀಡಿದ್ದಾರೆ. ಅದು ಕಟ್ಟುಕತೆಯಾಗಿದ್ದು, ಯಾವುದೇ ಭೂಮಿಯನ್ನು ಮೈಸೂರಿನಲ್ಲಿ ಉಳಿಸುವ ಕೆಲಸ ಮಾಡಲಿಲ್ಲ ಎಂದು ಹೇಳಿದರು. ಸಾರ್ವಜನಿಕರ ಹಣ ವ್ಯರ್ಥ ಮಾಡಿದ್ದೀರಿ. ಆ ಹಣವನ್ನು ರೋಹಿಣಿ ಸಿಂಧೂರಿಯಿಂದ ವಸೂಲಿ ಮಾಡಿ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಶಾಸಕ ಸಾ.ರಾ.ಮಹೇಶ್ ವಾಗ್ದಾಳಿ ರೋಹಿಣಿ ಸಿಂಧೂರಿ ಲೇಡಿ ಸಿಂಗಂ ಅಲ್ಲ. ಮೈಸೂರಿನ ಜನರನ್ನು ಮಂಗಂ ಮಾಡಲು ಹೊರಟ ಪ್ರಚಾರಪ್ರಿಯೆ. ಸರ್ವೇ ನಂ.4 ರ ಆಸ್ತಿ ವ್ಯಾಜ್ಯವನ್ನು ಸುಪ್ರೀಂಕೋರ್ಟ್ನಲ್ಲಿ ಹಾಕಿಸಿದ್ದೀರಿ. ಆ ಬಳಿಕ ಅದರ ಪ್ರತಿವಾದಿಯಾದ ರಾಜಮನೆತನದ ಪ್ರಮೋದಾದೇವಿ ಒಡೆಯರ್ ಜೊತೆ ತಿರುಪತಿಯಲ್ಲಿ ಕಾಣಿಸಿಕೊಂಡಿದ್ದೀರಿ. ಇವೆಲ್ಲಾ ಕಂಡಾಗ ನಮಗೆ ನಿಮ್ಮ ಮೇಲೆ ಅನುಮಾನ ಮೂಡುತ್ತಿದೆ. ಜೊತೆಗೆ ಆ ಕೇಸ್ ಸುಪ್ರೀಂಕೋರ್ಟ್ನಲ್ಲಿ ವಜಾ ಆಯಿತು ಎಂದು ಹೇಳಿದರು.
ಜೆಡಿಎಸ್ ಪಕ್ಷ ಟ್ರೈನಿಂಗ್ ಶಾಲೆ ಇದ್ದಂತೆ: ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಪಕ್ಷ ಟ್ರೈನಿಂಗ್ ಶಾಲೆ ಇದ್ದಂತೆ. ಜನರು ಬರುತ್ತಾರೆ ಕಲಿತುಕೊಂಡು ಹೋಗುತ್ತಾರೆ. ಈಗ ಮುಖ್ಯಮಂತ್ರಿ ಆಗಿರುವವರು ಜೆಡಿಎಸ್ನವರೇ. ಇಲ್ಲಿಗೆ ಬಂದು ಕಲಿತುಕೊಂಡು ಬೇರೆ ಪಕ್ಷಕ್ಕೆ ಹೋಗುತ್ತಾರೆ ಅಷ್ಟೇ ಎಂದರು.