ಸ್ಯಾಂಟ್ರೋ ರವಿ ಹೇಳಿಕೆಯನ್ನು ಲಿಖಿತವಾಗಿ ದಾಳಲಿಸಲಾಗುತ್ತಿದೆ : ಎಡಿಜಿಪಿ ಅಲೋಕ್ ಕುಮಾರ್ ಮೈಸೂರು:ನಿನ್ನೆ ಗುಜರಾತಿನ ಅಹಮಾದಾಬಾದ್ನಲ್ಲಿ ಬಂಧಿತನಾಗಿದ್ದ ಸ್ಯಾಂಟ್ರೋ ರವಿಯನ್ನು ಇಂದು ಮೈಸೂರಿಗೆ ಕರೆತಂದು, ದೂರು ದಾಖಲಾಗಿರುವ ವಿಜಯನಗರ ಪೋಲಿಸ್ ಠಾಣೆಗೆ ಬೆಳಗ್ಗೆ ಕರೆದುಕೊಂಡು ಹೋಗಿದ್ದೇವೆ. ಸಂತ್ರಸ್ತೆ ನೀಡಿದ ದೂರಿನ ಅನ್ವಯ ತನಿಖೆ ನಡೆಸಲಾಗುತ್ತಿದ್ದು, ಆತನ ಹೇಳಿಕೆಯನ್ನು ಲಿಖಿತ ರೂಪದಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿದೆ. ಎಲ್ಲ ತನಿಖೆಗೆ ಸ್ಯಾಂಟ್ರೋ ರವಿ ಸಹಕರಿಸುತ್ತಿದ್ದಾನೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ ನೀಡಿದರು.
ಗಂಟೆಗೊಮ್ಮೆ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದಾನೆ:ಪೋಲಿಸ್ ತನಿಖೆಯಲ್ಲಿ ಗಂಟೆಗೊಮ್ಮೆ ಸ್ಯಾಂಟ್ರೋ ರವಿ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದು, ಆತನಿಗೇ ಅಗತ್ಯ ಇರುವ ಔಷಧಗಳನ್ನು ಕೊಡಿಸಿ ಎಂದು ತನಿಖಾಧಿಕಾರಿಗಳಿಗೆ ಹೇಳಿದ್ದೇವೆ. ಲಿಖಿತವಾಗಿ ಹೇಳಿಕೆ ಪಡೆದ ನಂತರ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಮೆಡಿಕಲ್ ಚೆಕಪ್ ಮಾಡಿಸಿ ಅನಂತರ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ಈತನನ್ನು ಎರಡೂ ವಾರ ಪೋಲಿಸ್ ಕಸ್ಟಡಿಗೆ ನೀಡುವಂತೆ ಮನವಿ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆ ದಾಖಲು ಮಾಡಿರುವ ಕೇಸ್ಗೆ ಸಂಬಂಧ ಪಟ್ಟಂತೆ ಮಾತ್ರ ತನಿಖೆ:ಸ್ಯಾಂಟ್ರೋ ರವಿಯ ಮೇಲೆ ಹಲವು ಪ್ರಕರಣಗಳಿದ್ದರೂ ಸದ್ಯಕ್ಕೆ ಸಂತ್ರಸ್ತೆ ನೀಡಿದ ದೂರಿನ ಅನ್ವಯ ತನಿಖೆ ಕೈಗೊಳ್ಳಲಾಗಿವುದು. ಕೇಸ್ ದಾಖಲಾದ ನಂತರ ಅವನು ಎಲ್ಲೆಲ್ಲಿ ತಪ್ಪಿಸಿಕೊಂಡು ಓಡಾಡಿದ್ದಾನೆ ಎಂಬುದರ ಬಗ್ಗ ಕೇಳಲಾಗಿದ್ದು, ಮಾಹಿತಿ ನೀಡಿದ್ದಾನೆ. ಪೊಲೀಸರಿಗೆ ಸಿಕ್ಕ ಮಾಹಿತಿಯಂತೆ ಆತನ ಚಲನವಲನ ಇದ್ದದ್ದು ತಿಳಿದು ಬಂದಿದೆ. ಆತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನಂತರ ಕೇಸ್ ಕುರಿತಾಗಿ ಹೆಚ್ಚಿನ ತನಿಖೆ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಆತನನ್ನ ಪೋಲಿಸ್ ವಶಕ್ಕೆ ಪಡೆದ ನಂತರ ಇತರ ಹಿಂದಿನ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಾಗುವುದು. ಸ್ಯಾಂಟ್ರೋ ರವಿಗೆ ಡಯಾಬಿಟಿಸ್ ಬಿಟ್ಟರೆ ಇತರ ಕಾಯಿಲೆಗಳು ಇದ್ದಂತೆ ಕಾಣುತ್ತಿಲ್ಲ. ಸ್ಯಾಂಟ್ರೋ ರವಿ 11 ದಿನ ಎಲ್ಲೆಲ್ಲಿ ಓಡಾಡಿದ ಯಾರ್ಯರು ಅವನಿಗೆ ಸಹಾಯ ಮಾಡಿದರು ಎಂಬ ಪ್ರಾಥಮಿಕ ಮಾಹಿತಿ ಪಡೆದಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:ಸಿಎಂ ನಿವಾಸಕ್ಕೆ ಡಿಜಿ ಐಜಿಪಿ ಪ್ರವೀಣ್ ಸೂದ್ ಭೇಟಿ: ಸ್ಯಾಂಟ್ರೋ ರವಿ ಬಂಧನ ಕುರಿತು ವರದಿ ಸಲ್ಲಿಕೆ
ರಾಜಕೀಯದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದ್ದ, ವೇಶ್ಯಾವಾಟಿಕೆ, ಕೊಲೆ ಬೆದರಿಕೆ ಹೀಗೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಸ್ರಾಂಟ್ರೋ ರವಿಯನ್ನು ರಾಜ್ಯ ಪೊಲೀಸರು ಶುಕ್ರವಾರ ಗುಜರಾತ್ನ ಅಮಹಮದಾಬಾದ್ನಲ್ಲಿ ಬಂಧಿಸಿದ್ದರು. ಪ್ರಕರಣ ದಾಖಲಾಗಿ ರಾಜ್ಯದಲ್ಲಿ ದೊಡ್ಡ ಸುದ್ದಿಗೆ ಕಾರಣವಾಗಿತ್ತು. ರಾಜಕೀಯ ವ್ಯಕ್ತಿಗಳೊಂದಿಗೆ ಈತ ಕಾಣಿಸಿಕೊಂಡಿದ್ದರಿಂದ ಪಕ್ಷಗಳ ನಡುವಣ ಕೆಸರೆರಚಾಟಕ್ಕೆ ಕಾರಣವಾಗಿತ್ತು. ಸ್ಯಾಂಟ್ರೋ ರವಿ ವಿರುದ್ಧ ಸುಮಾರು 22ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ರವಿ ಬಂಧನಕ್ಕಾಗಿ ಎರಡು ಬಾರಿ ಸಭೆ ಮಾಡಿದ್ದ ಎಡಿಜಿಪಿ :ದೂರು ದಾಖಲಾಗಿ 10 ದಿನಗಳು ಕಳೆಯುತ್ತಿದ್ದರೂ ಸ್ಯಾಂಟ್ರೋ ರವಿ ಬಂಧನ ಆಗಿರದ ಹಿನ್ನೆಲೆ ಮತ್ತು ಉನ್ನತ ಅಧಿಕಾರಿ ಸಲಹೆ ಮೇರೆಗೆ ನಿನ್ನೆ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಸಭೆ ನಡೆಸಿದ್ದರು. ಸಭೆ ನಡೆಸಿದ ಬೆನ್ನಲ್ಲೆ ಗುಜರಾತ್ನಲ್ಲಿ ರವಿಯ ಬಂಧನ ಆಗಿರುವ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ್ದರು.
ಸ್ಯಾಂಟ್ರೊ ರವಿ ಬಂಧನಕ್ಕೆ ಪೊಲೀಸ್ ಬಲೆ:ವಿಶೇಷ ಪೊಲೀಸ್ ತಂಡಗಳು ರಾಮನಗರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಾಗೂ ಹೊರ ರಾಜ್ಯಗಳಿಗೂ ತೆರಳಿದ್ದವು. ಆದರೆ, ಸ್ಯಾಂಟ್ರೊ ರವಿ ತನ್ನ ಎಲ್ಲ ಮೊಬೈಲ್ಗಳನ್ನು ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರಿಂದ ಪೊಲೀಸರಿಗೆ ಆತನ ಹುಡುಕಾಡುವುದು ಕಷ್ಟವಾಗಿತ್ತು. ಈ ನಡುವೆ ಕಳೆದ ವಾರ ಮೈಸೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮಿನಿಗೆ ತಮ್ಮ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೊ ರವಿಯ ಅರ್ಜಿಯನ್ನು ಜನವರಿ 17 ಕ್ಕೆ ಮುಂದೂಡಲಾಗಿತ್ತು. ಈ ನಡುವೆ ರವಿಯ ಬಂಧನವಾಗಿದ್ದು, ನ್ಯಾಯಾಧಿಶರ ಮುಂದೆ ಹಾಜರುಪಡಿಸಿ ಎರಡು ವಾರಗಳ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ವಿನಂತಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಮೈಸೂರಿಗೆ ಸ್ಯಾಂಟ್ರೋ ರವಿ ಕರೆತಂದ ಪೊಲೀಸರು: ದಾಖಲಾಗಿರುವ ಪ್ರಕರಣದ ಬಗ್ಗೆ ಮಾತ್ರ ವಿಚಾರಣೆ... ಎಡಿಜಿಪಿ ಅಲೋಕ್ ಕುಮಾರ್