ಕರ್ನಾಟಕ

karnataka

ETV Bharat / state

ರಾಸುಗಳಿಗೆ ಕಿಚ್ಚು ಹಾಯಿಸಿ ಸಂಕ್ರಾಂತಿ ಆಚರಣೆ: ಫೋಟೋ ಝಲಕ್ - ಸಂಕ್ರಾಂತಿ ಆಚರಣೆ

ಮೈಸೂರಿನ ಗ್ರಾಮೀಣ ಭಾಗದಲ್ಲಿ ಸಂಕ್ರಾಂತಿ ಹಬ್ಬವನ್ನ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ರೈತರು ತಮ್ಮ ಜಾನುವಾರುಗಳಿಗೆ ಕಿಚ್ಚು ಹಾಯಿಸಿದರು.

ಜಾನುವಾರು ಕಿಚ್ಚು ಹಾಯುತ್ತಿರುವ ಫೋಟೋ
ಜಾನುವಾರು ಕಿಚ್ಚು ಹಾಯುತ್ತಿರುವ ಫೋಟೋ

By ETV Bharat Karnataka Team

Published : Jan 15, 2024, 3:21 PM IST

ಮೈಸೂರು : ಸುಗ್ಗಿ ಹಬ್ಬ ಸಂಕ್ರಾಂತಿ ಇಂದು ದೇಶಾದ್ಯಂತ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ರೈತರ ಆಧಾರ ಸ್ತಂಭವಾಗಿರುವ ಜಾನುವಾರುಗಳಿಗೆ ಕಿಚ್ಚು ಹಾಯಿಸಿ, ಸಂಭ್ರಮದಿಂದ ಸಂಕ್ರಾಂತಿಯನ್ನ ಆಚರಿಸಲಾಯಿತು.

ರಾಸುಗಳಿಗೆ ಕಿಚ್ಚು ಹಾಯಿಸಿ ಸಂಕ್ರಾಂತಿ ಆಚರಣೆ

ಸುಗ್ಗಿ ಹಬ್ಬ ಸಂಕ್ರಾಂತಿ ಹಿನ್ನೆಲೆ ನಗರ ಭಾಗದಲ್ಲಿ ಎಳ್ಳುಬೆಲ್ಲ ಹಂಚಿ ಸಾಂಪ್ರದಾಯಿಕವಾಗಿ ಆಚರಣೆ ಮಾಡಿದರು. ಇತ್ತ ಗ್ರಾಮೀಣ ಭಾಗದಲ್ಲಿ ವರ್ಷವಿಡೀ ಜಮೀನಿನಲ್ಲಿ ಕೆಲಸ ಮಾಡಿ, ರೈತನಿಗೆ ಅನ್ನದಾತನಾದ ಜಾನುವಾರುಗಳನ್ನು ಚೆನ್ನಾಗಿ ತೊಳೆದು, ಅವುಗಳಿಗೆ ಬಣ್ಣ ಹಾಕಿ, ವಿಶಿಷ್ಟ ರೀತಿಯಲ್ಲಿ ಅಲಂಕಾರ ಮಾಡಿ, ಅವುಗಳಿಗೆ ಪೂಜೆ ಸಲ್ಲಿಸಿ, ನಂತರ ಕಿಚ್ಚು ಹಾಯಿಸಿ ಸಂಭ್ರಮ ಪಟ್ಟರು.

ಜಾನುವಾರುಗಳಿಗೆ ಕಿಚ್ಚು ಹಾಯಿಸಿದ ರೈತರು

ನೆನ್ನೆಯೇ ಕಿಚ್ಚು ಹಾಯಿಸಿದ ರೈತರು: ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ದಿನ ಸಂಜೆ ರಾಸುಗಳಿಗೆ ಕಿಚ್ಚು ಹಾರಿಸುವುದು ಸಂಪ್ರದಾಯ. ಆದರೆ, ಈ ಬಾರಿ ಸಂಕ್ರಾಂತಿ ಸೋಮವಾರ ಬಂದಿರುವುದರಿಂದ, ಸೋಮವಾರ ಬಸವೇಶ್ವರನ ವಾರವಾಗಿರುವುದರಿಂದ, ಜಾನುವಾರುಗಳಿಗೆ ವಾರದ ರಜೆ ದಿನ. ಅಂದು ಜಾನುವಾರುಗಳಿಂದ ಯಾವುದೇ ಕೆಲಸ ಮಾಡಿಸುವುದಿಲ್ಲ. ಆದ್ದರಿಂದ ಸಂಕ್ರಾಂತಿ ಸೋಮವಾರವೇ ಬಂದಿದ್ದು, ಇದರಿಂದ ರೈತರು ಭಾನುವಾರ ಸಂಜೆಯೇ ತಮ್ಮ ರಾಸುಗಳಿಗೆ ಕಿಚ್ಚು ಹಾಯಿಸಿ ಸಂಭ್ರಮ ಪಟ್ಟರು. ಈ ರೀತಿಯಲ್ಲಿ ನಾಲ್ಕು ವರ್ಷಕೊಮ್ಮೆ ಸಂಕ್ರಾಂತಿ ಹಿಂದಿನ ದಿನ ಕಿಚ್ಚು ಹಾಯಿಸುವ ದಿನ ಬದಲಾಗುವುದು ವಿಶೇಷವಾಗಿದೆ.

ಕಿಚ್ಚು ಹಾಯಿಸಿ ಸಂಭ್ರಮ ಪಟ್ಟ ರೈತರು

ಮೈಸೂರಿನ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ, ಗ್ರಾಮದ ಸರ್ವೀಸ್ ರಸ್ತೆಯಲ್ಲಿ ತಾವು ಸಾಕಿರುವ ಎತ್ತುಗಳು, ಕುರಿ, ಟಗರು ಸೇರಿದಂತೆ ವಿವಿಧ ಜಾನುವಾರುಗಳನ್ನು ಭತ್ತದ ಹುಲ್ಲಿನಿಂದ ಮಾಡಿದ ಕಿಚ್ಚು ಹಾಯಿಸುವ ಸ್ಥಳದಲ್ಲಿ ಬೆಂಕಿ ಹಾಕಿ, ಅದರಲ್ಲಿ ತಮ್ಮ ರಾಸುಗಳನ್ನ ನೆಗೆಸುವುದು ವಿಶೇಷವಾಗಿದೆ. ಇದನ್ನು ನೋಡಲು ಬೇರೆ ಬೇರೆ ಕಡೆಯಿಂದಲೂ ಜನರು ಆಗಮಿಸಿದ್ದು ವಿಶೇಷವಾಗಿತ್ತು. ಆ ಮೂಲಕ ತಮ್ಮ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿ ಹಬ್ಬವನ್ನು ರಾಸುಗಳ ಜೊತೆ ರೈತರು ವಿಶೇಷವಾಗಿ ಆಚರಿಸಿದರು.

ಜಾನುವಾರುವೊಂದು ಕಿಚ್ಚನ್ನು ಹಾಯುತ್ತಿರುವುದು

ಧಾರವಾಡದಲ್ಲಿ ಮಹಿಳೆಯರಿಂದ ಸಂಕ್ರಾಂತಿ ಸಂಭ್ರಮ (ಪ್ರತ್ಯೇಕ ಸುದ್ದಿ) : ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣ. ಸೂರ್ಯ ತನ್ನ ಪಥ ಬದಲಿಸುವ ಹಬ್ಬವನ್ನು ಉತ್ತರ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಬಗೆಬಗೆಯ ತಿಂಡಿ-ತಿನಿಸುಗಳನ್ನು ಒಂದೆಡೆ ತಂದಿಟ್ಟು ಸಂಭ್ರಮಿಸುತ್ತಾರೆ. ಬಣ್ಣಬಣ್ಣದ ಇಳಕಲ್ ಸೀರೆ, ಆಭರಣಗಳಲ್ಲಿ ಮಹಿಳೆಯರು ಕಂಗೊಳಿಸುತ್ತಾರೆ. 'ತಾಯಿ ಗಂಗವ್ವನ ಪೂಜೆಯ ಮಾಡಿ ಮನಸ್ಸಿನ ಮೈಲಿಗೆ ತೊಳಿಯಕ್ಕಾ' ಎಂಬ ಹಬ್ಬದ ಹಾಡು ಹಾಡುತ್ತಾರೆ.

ಜಾನುವಾರುವಿನ ಕಿಚ್ಚನ್ನು ಹಾಯಿಸಿದ ರೈತ

ಧಾರವಾಡದ ಜಾನಪದ ಸಂಶೋಧನಾ ಕೇಂದ್ರದ ಸದಸ್ಯರು ರಂಗಾಯಣದ ಆವರಣದಲ್ಲಿ ತಮ್ಮ ಮನೆಯಿಂದ ಖಡಕ್ ರೊಟ್ಟಿ, ಸಜ್ಜಿ ರೊಟ್ಟಿ, ರಾಗಿ ರೊಟ್ಟಿ, ಎಳ್ಳುಹಚ್ಚಿದ ರೊಟ್ಟಿ, ಮಾದಲಿ, ಎಣಕಾಯಿ ಪಲ್ಲೆ, ಕೆಂಪು ಚಟ್ನಿ, ಮೊಸರು ಸೇರಿದಂತೆ ವಿವಿಧ ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ತಂದು ಸವಿದು ಸಂತಸಪಟ್ಟರು.

ಜಾನುವಾರು ಕಿಚ್ಚು ಹಾಯುತ್ತಿರುವ ಫೋಟೋ

ಇದನ್ನೂ ಓದಿ:ಧಾರವಾಡ: ಮಹಿಳೆಯರಿಂದ ಕಲರ್‌ಫುಲ್ ಸಂಕ್ರಾಂತಿ ಆಚರಣೆ

ABOUT THE AUTHOR

...view details