ಮೈಸೂರು: ಶ್ರೀಗಂಧದ ಮರಗಳ್ಳರನ್ನು ಬಂಧಿಸಿ, ಬಂಧಿತರಿಂದ 35 ಲಕ್ಷ ರೂ. ಮೌಲ್ಯದ ಶ್ರೀಗಂಧದ ಮರವನ್ನು ಮೇಟಗಳ್ಳಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೈಸೂರು ತಾಲೂಕು ಇಲವಾಲದ ರಘು (46), ಮಂಜುನಾಥ (22), ಕಲ್ಯಾಣಿಗಿರಿಯ ಸೈಯದ್ ಗೌಸ್ ಮೊಹಿದ್ದೀನ್ (50), ಲಷ್ಕರ್ ಮೊಹಲ್ಲಾದ ಮಕ್ಬುಲ್ ಷರೀಫ್ (58) ಬಂಧಿತರು.
ಬೆಲವತ್ತ ರಿಂಗ್ ರೋಡ್ ಪಕ್ಕದಲ್ಲಿರುವ ಭಾರತೀಯ ನೋಟು ಮುದ್ರಣ ಘಟಕದ ಕಾಂಪೌಂಡ್‌ನಿಂದ ಒಳಗೆ ನುಸುಳಿ ಅಲ್ಲಿರುವ ಕಾಡಿನೊಳಗೆ ಬೆಳೆದಿದ್ದ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸಲು ಯತ್ನಿಸಿದ್ದರು. ಆರ್‌ಬಿಐ ಭದ್ರತಾ ಸಿಬ್ಬಂದಿ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಪೊಲೀಸರು ರೆಡ್‌ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.
ಬಂಧಿತರಿಂದ 35 ಲಕ್ಷ ರೂ. ಮೌಲ್ಯದ 230 ಕೆ.ಜಿ. ತೂಕದ ಶ್ರೀಗಂಧ ಹಾಗೂ ಕೃತ್ಯಕ್ಕೆ ಬಳಸಿದ್ದ ಮಚ್ಚು, ಕೊಡಲಿ, ಗರಗಸ, ಬೈಕ್, ತೂಕದ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಘು ಮತ್ತು ಮಂಜುನಾಥ್ ಆರೋಪಿಗಳು ಕಳ್ಳತನ ಮಾಡಿದ ಶ್ರೀಗಂಧದ ತುಂಡುಗಳನ್ನು ಮಕ್ಬುಲ್ ಷರೀಫನಿಗೆ ಮಾರಾಟ ಮಾಡುತ್ತಿದ್ದರು. ಈತ ಅದನ್ನು ಸೈಯದ್‌ಗೆ ಮಾರುತ್ತಿದ್ದ ಎನ್ನಲಾಗ್ತಿದೆ.