ಮೈಸೂರು:''ಬೆಂಗಳೂರು- ಮೈಸೂರು ನಡುವಿನ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಸುರಕ್ಷಿತ ಕ್ರಮ ಕೈಗೊಂಡಿಲ್ಲ'' ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಇಂದು ಶನಿವಾರ ಅರಮನೆಗೆ ಭೇಟಿ ನೀಡಿ, ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ತಮ್ಮ ಕುಟುಂಬದಸ್ಥರೊಂದಿಗೆ ಅರಮನೆ ವೀಕ್ಷಣೆ ಮಾಡಿದರು. ಅರಮನೆ ಮಂಡಳಿಯಿಂದ ಸಚಿವರಿಗೆ ಮೈಸೂರು ಪೇಟ ತೊಡಿಸಿ ಸಾಂಪ್ರದಾಯಿಕ ಸ್ವಾಗತ ನೀಡಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ''ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಚೆಕ್ಕಿಂಗ್ ಮೊದಲಿನಿಂದಲೂ ಇದೆ. ಸಾರ್ವಜನಿಕರಿಗೆ ತೊಂದರೆ ಆಗದಂತೆ ಮತ್ತಷ್ಟು ಸುರಕ್ಷತೆ ಕೈಗೊಳ್ಳಲು ಬೇಕಾದಂತಹ ಕ್ರಮಗಳನ್ನು ಜರುಗಿಸಲಾಗುವುದು'' ಎಂದರು.
ಸುಗಮ ಸಂಚಾರಕ್ಕಾಗಿ ಸುರಕ್ಷತಾ ಕ್ರಮ ಕೈಗೊಂಡಿಲ್ಲ:''ಮೈಸೂರು - ಬೆಂಗಳೂರು ನಡುವಿನ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೇಂದ್ರ ಸರ್ಕಾರ ಹಾಗೂ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿಲ್ಲ. ಹೆದ್ದಾರಿಯಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಬೇರೆ ಹೆದ್ದಾರಿಗಳ ರೀತಿಯಲ್ಲಿ ವ್ಯವಸ್ಥಿತವಾಗಿ ಇದರಲ್ಲಿ ಏನನ್ನೂ ಮಾಡಿಲ್ಲ. ರಾಜ್ಯ ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಈ ಕುರಿತು ನನಗೆ ಮಾಹಿತಿ ನೀಡಿದ್ದಾರೆ. ಹೆದ್ದಾರಿಯಲ್ಲಿ ದರೋಡೆ ಪ್ರಕರಣಗಳು ಕೂಡ ನಡೆಯುತ್ತಿವೆ. ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ'' ಎಂದು ಅವರು ತಿಳಿಸಿದರು.
''ನಾವು ಹೆದ್ದಾರಿ ಪ್ರಾಧಿಕಾರಕ್ಕೆ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡದಂತೆ ಸೂಚನೆ ನೀಡಿದ್ದೆವು. ಆದರೂ ಕೂಡ ಟೋಲ್ ವಸೂಲಾತಿ ಶುರು ಮಾಡಿದ್ದಾರೆ. ಹೆದ್ದಾರಿಯ ಪ್ರಾಧಿಕಾರ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಚುನಾವಣೆಗೂ ಮುನ್ನ ಅವಸರದಿಂದ ರಾಜಕೀಯ ಉದ್ದೇಶದಿಂದ ಈ ಹೆದ್ದಾರಿಯನ್ನು ಉದ್ಘಾಟನೆ ಮಾಡಿದ್ದರು. ಹೀಗಾಗಿಯೇ ಇಷ್ಟೆಲ್ಲ ಸಮಸ್ಯೆಗಳು ಆಗುತ್ತಿವೆ. ಹೈವೇ ಕಾಮಗಾರಿ ಸಂಪೂರ್ಣ ಮುಗಿದಿಲ್ಲ. ಇದರಿಂದ ಹೆದ್ದಾರಿಯಲ್ಲಿ ಹಲವು ಜನ ಮೃತಪಟ್ಟಿದ್ದಾರೆ. ರಸ್ತೆ ಕಾಮಗಾರಿಯಲ್ಲಿ ಬಹಳ ಲೋಪವಾಗಿರುವುದೇ ಇದಕ್ಕೆ ಕಾರಣ'' ಎಂದು ಕಿಡಿಕಾರಿದರು.