ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಂಯುಕ್ತಾಶ್ರಯದಲ್ಲಿ ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಕನಕಗಿರಿ ಸರಕಾರಿ ಶಾಲೆಯಲ್ಲಿ ಬುಧವಾರ ಆಯೋಜಿಸಲಾಗಿದ್ದ ಪ್ರೇರಣಾ ಪರೀಕ್ಷೆ ಹಾಗೂ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗಿನ ಆತ್ಮೀಯ ಸಂವಾದ ಕಾರ್ಯಕ್ರಮಕ್ಕೆ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. 'ಎಸ್ಎಸ್ಎಲ್‌ಸಿ ಪರೀಕ್ಷೆಗೆ ದಿನಗಣನೆ ಆರಂಭವಾಗಿದೆ. ಭವಿಷ್ಯದ ಬಹುಮುಖ್ಯ ಘಟ್ಟವಾಗಿರುವ ಪರೀಕ್ಷೆಯಲ್ಲಿ ಈ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ ಮನೆ ಉಡುಗೊರೆ ನೀಡಲಾಗುವುದು' ಎಂದು ಈ ಸಂದರ್ಭದಲ್ಲಿ ರಾಮದಾಸ್ ಘೋಷಿಸಿದರು.
'ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಎಷ್ಟರಮಟ್ಟಿಗೆ ತ್ಯಾಗ ಮಾಡಲಿದ್ದಾರೋ ಅಷ್ಟೇ ಪ್ರಮಾಣದ ತ್ಯಾಗಕ್ಕೂ ಸರಕಾರ ಕಂಕಣಬದ್ದವಾಗಿದೆ. ನೀವು ಕಲಿತು ಸತ್ಪ್ರಜೆಗಳಾದರೆ, ಉನ್ನತ ಸ್ಥಾನಕ್ಕೇರಿದರೆ ಅದೇ ನೀವು ಸಮಾಜ, ನಿಮ್ಮ ಪೋಷಕರಿಗೆ ಕೊಡಬಹುದಾದ ದೊಡ್ಡ ಉಡುಗೊರೆ. ಆದ್ದರಿಂದ ಉಳಿದಿರುವ ಕೇವಲ 90 ದಿನಗಳಲ್ಲಿ ನಿಮ್ಮೆಲ್ಲರ ಬದಲಾವಣೆಯೇ ನಮ್ಮ ಸಂಕಲ್ಪ. ಅದಕ್ಕಾಗಿಯೇ ಈ ಪ್ರೇರಣ ಪರೀಕ್ಷೆ' ಎಂದರು.
'ಏಪ್ರಿಲ್ ತಿಂಗಳಲ್ಲಿ ನಡೆಯುವ ಪರೀಕ್ಷೆಯಲ್ಲಿ ಎಲ್ಲರೂ ಪ್ರಥಮ ದರ್ಜೆಗಿಂತ ಹೆಚ್ಚಿನ ಅಂಕ ಗಳಿಸಬೇಕು. ಹಾಗೆ ಗಳಿಸುವ ಮಕ್ಕಳ ಮನೆಗೆ ನಾನೇ ಬಂದು ಅಭಿನಂದನೆ ಸಲ್ಲಿಸುತ್ತೇನೆ. ಮಾತ್ರವಲ್ಲ, 10 ಲಕ್ಷ ರೂ ಬೆಲೆ ಬಾಳುವ ಮನೆ ಸರಕಾರದ ಯೋಜನೆಯೊಂದರ ಮುಖೇನ ನಿಮ್ಮ ಪಾಲಿಗೆ ದಕ್ಕಲಿದೆ' ಎಂದು ಹೇಳಿದರು. 'ಕನಕಗಿರಿಯ ಈ ಶಾಲೆಯನ್ನು ದತ್ತು ಸ್ವೀಕಾರ ಮಾಡಿದ್ದೇನೆ. ಇಲ್ಲಿನ ಮಕ್ಕಳು ಖಾಸಗಿ ಶಾಲೆಯ ಮಕ್ಕಳಿಗೆ ಸೆಡ್ಡು ಹೊಡೆಯಬೇಕು. ಆ ಇಚ್ಛಾಶಕ್ತಿ ನಿಮಗೆ ಬರಬೇಕು ಎಂದ ಅವರು, ಪ್ರಸ್ತುತ 46 ಮಕ್ಕಳು ಎಸ್ಎಸ್ಎಲ್‌ಸಿ ವ್ಯಾಸಂಗ ಮಾಡುತ್ತಿದ್ದು, ಎಲ್ಲರೂ ತೇರ್ಗಡೆಯಾಗಲೇಬೇಕು. ಅದು ನಮ್ಮ ನಿಮ್ಮೆಲ್ಲರ ಸಂಕಲ್ಪವಾಗಬೇಕು' ಎಂದು ಕಿವಿಮಾತು ಹೇಳಿದರು.