ಮೈಸೂರು:ಕಾಂಗ್ರೆಸ್ನಲ್ಲಿ ಬಹಳ ವರ್ಷಗಳಿಂದ ಇದ್ದ ಎಚ್.ವಿಶ್ವನಾಥ್ ಅವರು ಎಂಎಲ್ಸಿ ಸ್ಥಾನಗಳನ್ನು ಸೂಕ್ಷ್ಮಾತಿ ಜನರಿಗೆ ಕೊಡು ಎನ್ನುತ್ತಿದ್ದರು. ಆದರೀಗ ಅವರು ಸೂಕ್ಷ್ಮಾತಿ ಜಾತಿಯೇ ಎಂದು ಶಾಸಕ ಸಾ.ರಾ.ಮಹೇಶ್ ಹಳ್ಳಿಹಕ್ಕಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಶ್ವನಾಥ್ ಸೂಕ್ಷ್ಮಾತಿ ಜಾತಿಯವರೇ ಸಾ.ರಾ.ಮಹೇಶ್ ವಾಗ್ದಾಳಿ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಂಎಲ್ಸಿ ಆಗಲು ಪ್ರಯತ್ನಿಸುತ್ತಿರುವ ಮಾಜಿ ಸಚಿವ ಎಚ್. ವಿಶ್ವನಾಥ್ ಬಹಳ ವರ್ಷಗಳ ಕಾಲ ಕಾಂಗ್ರೆಸ್ನಲ್ಲಿದ್ದಾಗ ದೆಹಲಿಯ 10 ಜನಪಥ್ಗೆ ಹೋಗಿ ಸೂಕ್ಷ್ಮಾತಿಸೂಕ್ಷ್ಮ ಜಾತಿಗಳಿಗೆ ವಿಧಾನ ಪರಿಷತ್ ಸ್ಥಾನ ನೀಡುವಂತೆ ಕೇಳುತ್ತಿದ್ದರು. ಈಗ ಎಂಎಲ್ಸಿ ಸ್ಥಾನ ಕೇಳುತ್ತಿರುವ ಇವರದು ಸೂಕ್ಷ್ಮಾತಿಸೂಕ್ಷ್ಮ ಜಾತಿಯೇ? ಈ ಮೂಲಕ ಇವರದು ಕೊಳಚೆ, ಕೊಳಕು ಮನಸ್ಸು ಎಂಬುದು ರಾಜ್ಯದ ಜನರಿಗೆ ಸಾಬೀತಾಗಿದೆ ಎಂದು ಹರಿಹಾಯ್ದರು.
ಮೈಸೂರು ಜಿಲ್ಲೆಯಲ್ಲಿ ವರ್ಗಾವಣೆಗಳು ಪಾರದರ್ಶಕವಾಗಿ ನಡೆಯುತ್ತಿಲ್ಲ. ಎಸಿಬಿ ದಾಳಿಗೆ ಸಿಲುಕಿ ನಾಪತ್ತೆಯಾಗಿರುವ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ತಪ್ಪಿತಸ್ಥ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಿಲ್ಲ ಎಂದು ಆರೋಪಿಸಿದರು.
80 ವರ್ಷದ ವ್ಯಕ್ತಿಯನ್ನು ರಾಜ್ಯಸಭೆಗೆ ಕಳುಹಿಸುತ್ತಿದೆ ಎಂದು ವ್ಯಂಗ್ಯವಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರಿಗೆ ತಿರುಗೇಟು ನೀಡಿದ ಸಾ.ರಾ.ಮಹೇಶ್, ರಾಜ್ಯಸಭೆ ಆಯ್ಕೆ ಸಂಬಂಧ ಇವರು ಕಳುಹಿಸಿದ ಪಟ್ಟಿಯನ್ನ ಅವರ ಪಕ್ಷದವರೇ ಏನು ಮಾಡಿದರು ಎನ್ನುವುದು ದೇಶಕ್ಕೆ ಗೊತ್ತಿದೆ. ಅವರ ಪರಿಸ್ಥಿತಿ ನೋಡಿಕೊಳ್ಳಲಿ ಸಾಕು ಎಂದರು.
ಮೈಮುಲ್ ನೇಮಕಾತಿ ಬಗ್ಗೆ ಪ್ರತಿಕ್ರಿಯಿಸಿ, ಮೈಸೂರು ಹಾಲು ಒಕ್ಕೂಟದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ನಮ್ಮ ಹೋರಾಟಕ್ಕೆ ನ್ಯಾಯ ಸಿಕ್ಕಿದೆ. ಮೈಮುಲ್ ಆಡಳಿತ ಮಂಡಳಿಗೆ ತುರ್ತು ನೋಟಿಸ್ ಜಾರಿ ಮಾಡಿದ್ದು, ಜೂನ್ 29ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ. ಮೈಮುಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ತತ್ ಕ್ಷಣವೇ ಪರೀಕ್ಷಾ ಪ್ರಕ್ರಿಯೆಯ ಹೊಣೆ ಹೊತ್ತಿದ್ದ ಏಜೆನ್ಸಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು ಆಗ್ರಹಿಸಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸುವ ವಿಚಾರದಲ್ಲಿ ಸಚಿವ ಸುರೇಶ್ ಕುಮಾರ್ ಸಾಕಷ್ಟು ಅನುಭವಿಯಾಗಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ತೆಗೆದುಕೊಳ್ಳುವ ನಿರ್ಧಾರವನ್ನು ಬೆಂಬಲಿಸುತ್ತೇವೆ. ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ಎನ್- 95 ಮಾಸ್ಕ್ಗಳನ್ನು ನೀಡುವುದರ ಜೊತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.