ಮೈಸೂರು:ಜಮೀರ್ ಮನೆ ಮೇಲೆ ಎಸಿಬಿ ದಾಳಿ ಆಗಿದ್ದು ಮೊದಲು ಖುಷಿ ಪಡೋರು ಕಾಂಗ್ರೆಸ್ಸಿನವರೇ, ಏಕೆಂದರೆ ಅವರು ಸಿಎಂ ಆಗಲಿ ಇವರು ಸಿಎಂ ಆಗಲಿ ಎಂದು ಜಮೀರ್ ಆಗಾಗ ಹೇಳಿಕೆ ಕೊಡುತ್ತಿರುತ್ತಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಜಮೀರ್ ಅಹಮದ್ ಮನೆ ಮೇಲೆ ನಡೆದ ಎಸಿಬಿ ದಾಳಿಗೆ ಕಾಂಗ್ರೆಸ್ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿ, ಜಮೀರ್ ಮನೆಯ ಮೇಲೆ ಎಸಿಬಿ ದಾಳಿ ಆಗಿರುವ ಬಗ್ಗೆ ಖುಷಿ ಪಡೋರು ಕಾಂಗ್ರೆಸ್ಸಿನವರೇ ಏಕೆಂದರೆ ಜಮೀರ್, ಅವರು ಸಿಎಂ ಆಗಲಿ ಇವರು ಸಿಎಂ ಆಗಲಿ ಅಂತ ಹೇಳಿಕೆ ಕೊಡುತ್ತಿರುತ್ತಾರೆ. ಇದರಿಂದ ಒಳಗೆ ಖುಷಿ ಪಟ್ಟುಕೊಂಡು ಹೊರಗಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಶಾಸಕ ಜಮೀರ್ ಪ್ರಾಮಾಣಿಕರಾಗಿದ್ದರೆ ಏನು ಆಗಲ್ಲ ಎಂದು ಕಾಂಗ್ರೆಸ್ ಅವರು ಧೈರ್ಯ ತುಂಬಬೇಕು ಅದನ್ನು ಬಿಟ್ಟು ಏಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಚಿವರು ಪ್ರಶ್ನಿಸಿದರು.
ಸಿಎಂ ದಿಟ್ಟ ನಿಲುವು : ಪಿಎಸ್ಐ ನೇಮಕ ಹಗರಣದಲ್ಲಿ ಎಡಿಜಿಪಿ ಬಂಧನ ಮಾಡಿರುವುದಕ್ಕೆ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಿರುದ್ಯೋಗಿಗಳ ಮನಸ್ಸಿಗೆ ನೋವುಂಟು ಮಾಡಿ, ಚೆಲ್ಲಾಟ ಆಡಿದವರ ಮೇಲೆ ಸರ್ಕಾರ ಕ್ರಮ ಜರುಗಿಸಿದ್ದು ಎಷ್ಟೇ ದೊಡ್ಡವರಾಗಿದ್ದರು ಅವರನ್ನು ಮಟ್ಟಹಾಕುವ ಕೆಲಸವನ್ನು ಸರ್ಕಾರ ಮಾಡಲಿದೆ. ಈ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡುವುದಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಸಿಎಂ ಮೇಲೆ ಒತ್ತಡ ಇದ್ದರೂ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಇಂತಹ ಕ್ರಮ ಸಾಧ್ಯವೇ, ಇಂತಹ ನೂರಾರು ಕೇಸ್ ಗಳನ್ನು ಕಾಂಗ್ರೆಸ್ ಮುಚ್ಚಿ ಹಾಕಿದೆ ಎಂದು ಸೋಮ್ ಶೇಖರ್ ವಾಗ್ದಾಳಿ ನಡೆಸಿದರು.