ಮೈಸೂರು :ಈ ಬಾರಿ ಸರಳ ದಸರಾದಲ್ಲಿ ಅಭಿಮನ್ಯು ಆನೆ ಚಿನ್ನದ ಅಂಬಾರಿ ಹೊರಲಿದೆ. ಅರಮನೆ ಒಳಗಡೆ ಮಾತ್ರ ಜಂಬೂಸವಾರಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಕೊರೊನಾ ಹಿನ್ನೆಲೆ ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 10 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ವೀರನಹೊಸಳ್ಳಿಯ ಗಜಪಯಣ ಇರುವುದಿಲ್ಲ. ಜಿಲ್ಲಾಧಿಕಾರಿಗಳು ಸಾಂಪ್ರದಾಯಿಕವಾಗಿ ಆನೆಗಳನ್ನು ಸ್ವಾಗತ ಮಾಡಲಿದ್ದು, ಅಕ್ಟೋಬರ್ 2ರಂದು 12:18ರ ಶುಭ ಲಗ್ನದಲ್ಲಿ ಗಜಪಡೆಯನ್ನು ಅರಮನೆ ಆವರಣಕ್ಕೆ ಬರಮಾಡಿಕೊಳ್ಳಲಾಗುವುದು.
ಹಾಗೂ 5 ಆನೆಗಳು ಮಾತ್ರ ಸರಳ ದಸರಾದಲ್ಲಿ ಭಾಗವಹಿಸಲಿದ್ದು, ಅಭಿಮನ್ಯು ಅಂಬಾರಿ ಹೊರಲಿದ್ದಾನೆ. ಇದರ ಜೊತೆಗೆ ವಿಕ್ರಮ, ವಿಜಯ, ಗೋಪಿ ಮತ್ತು ಕಾವೇರಿ 5 ಆನೆಗಳು ದಸರಾದಲ್ಲಿ ಭಾಗವಹಿಸಲಿವೆ.
ಸರಳ ದಸರಾದಲ್ಲಿ ಅಂಬಾರಿ ಹೊರಲಿದ್ದಾನೆ ಕೂಂಬಿಂಗ್ ಸ್ಪೆಷಲಿಸ್ಟ್ ಅಭಿಮನ್ಯು ಅಕ್ಟೋಬರ್ 17 ರಂದು ಬೆಳಗ್ಗೆ 7:45 ರಿಂದ 8:15ರೊಳಗಿನ ಶುಭ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ಐವರು ಕೊರೊನಾ ವಾರಿಯರ್‌ಗಳಿಂದ ದಸರಾ ಉದ್ಘಾಟನೆಯಾಗಲಿದೆ. ಈ ಐವರು ಕೊರೊನಾ ವಾರಿಯರ್ಸ್‌ನ ಆಯಾ ಇಲಾಖೆಯ ಮುಖ್ಯಸ್ಥರೇ ಆಯ್ಕೆ ಮಾಡಲಿದ್ದಾರೆ.
ಪ್ರತಿ ವರ್ಷದಂತೆ ಮೈಸೂರು ನಗರದಾದ್ಯಂತ ವಿದ್ಯುತ್ ಅಲಂಕಾರ ಇರಲಿದ್ದು, ಇದನ್ನು ವಿದ್ಯುತ್ ಇಲಾಖೆ(ಚೆಸ್ಕಾಂ) ನೋಡಿಕೊಳ್ಳಲಿದೆ. ಇದರ ಜೊತೆಗೆ ಅರಮನೆ ಒಳಗೆ 9 ದಿನಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ಇರಲಿವೆ. ಸುಮಾರು 2000 ಜನ ವೀಕ್ಷಣೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಜಂಬೂಸವಾರಿಯು ಅರಮನೆ ಒಳಗೆ ಮಾತ್ರ ನಡೆಯಲಿದ್ದು, ನಂದಿ ಪೂಜೆಗೆ ಮುಖ್ಯಮಂತ್ರಿಗಳು ಹಾಗೂ ಇತರ ಆಯ್ದ ಗಣ್ಯರಿಗೆ ಮಾತ್ರ ಅವಕಾಶ ಮಾಡಿಕೊಡಲಾಗುವುದು. ಸರಳ ಜಂಬೂಸವಾರಿಯಲ್ಲಿ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ಮಾಡಲಿದ್ದು, ಸಾಂಪ್ರದಾಯ ಮತ್ತು ಸರಳವಾಗಿ ನಡೆಯುವ ದಸರಾ ಉದ್ಘಾಟಕರನ್ನು ಮುಖ್ಯಮಂತ್ರಿಗಳು ಫೈನಲ್ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ತಿಳಿಸಿದರು.