ಮೈಸೂರು: ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದಲ್ಲಿ ಬಹಳಷ್ಟು ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು, ಸಂಚಾರ ಅಸ್ತವ್ಯಸ್ಥಗೊಂಡಿದೆ . ಗ್ರಾಮೀಣ ರಸ್ತೆಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಜನರು ನಿತ್ಯ ಸಂಚರಿಸಬೇಕಾಗಿದೆ. ಸಮೀಪದ ತುಂಬಲ ಗ್ರಾಮದಿಂದ ತಾಲೂಕು ಟಿ. ನರಸೀಪುರ ಮತ್ತು ಬನ್ನೂರು ಕಡೆಗೆ ಹೋಗುವ ರಸ್ತೆಗಳು ತೀರಾ ಹದಗೆಟ್ಟಿವೆ. ರಸ್ತೆ ದುರಸ್ತಿಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಜೀವ ಹಿಂಡುವ ಗುಂಡಿಗಳು: ರಸ್ತೆ ತುಂಬ ಬರೀ ಗುಂಡಿಗಳೇ ಕಣ್ಣಿಗೆ ಗೋಚರಿಸುತ್ತವೆ. ಇದೂ ರಸ್ತೆಯೋ, ಜಮೀನಿಗೆ ಹೋಗುವ ರಸ್ತೆಯೋ ಎಂಬ ಗೊಂದಲ ಸೃಷ್ಟಿಸುವಂತಿದೆ. ಈ ರಸ್ತೆಯಲ್ಲಿ ರಾತ್ರಿ ವೇಳೆ ಅಲ್ಲ, ಹಗಲಿನಲ್ಲಿ ಸಂಚಾರ ಮಾಡುವುದು ಕಷ್ಟ ಪಡಬೇಕಿದೆ. ಈ ರಸ್ತೆಯಲ್ಲಿ ಪ್ರತಿ ನಿತ್ಯ ಪ್ರಯಾಣಿಸುವ ನೂರಾರು ವಿದ್ಯಾರ್ಥಿಗಳು ಪ್ರಾಣ ಕೈಯಲಿ ಹಿಡಿದುಕೊಂಡು ಶಾಲಾ ಕಾಲೇಜುಗಳಿಗೆ ಹೋಗಬೇಕಾಗಿದೆ. ವಾಹನ ಸವಾರರಂತೂ ವಾಹನ ಚಲಾಯಿಸಲೂ ಪರದಾಡುವಂತಾಗಿದೆ. ಈ ರಸ್ತೆ ಅವ್ಯವಸ್ಥೆ ಕಂಡು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ನಿತ್ಯ ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.