ಮೈಸೂರು: ಮುಡಾ ನಿವೇಶನಗಳ ಮೊದಲ ಹಂತದ ಇ-ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. 198 ನಿವೇಶನಗಳು ಹರಾಜಾಗಿದ್ದು, ಮುಡಾಗೆ 140 ಕೋಟಿ ರೂ. ಆದಾಯ ಬಂದಿದೆ.
ಈ ಹಿಂದೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಇ-ಹರಾಜು ಪ್ರಕ್ರಿಯೆ ಪ್ರಾರಂಭಿಸಿ ನಿವೇಶನಗಳಿಗೆ ಬಿಡ್ ಮಾಡಲು ಅವಕಾಶ ನೀಡಿತ್ತು, ಅದರಂತೆ ಇ-ಹರಾಜಿಗಿದ್ದ ವಿವಿಧ ವಿಸ್ತೀರ್ಣದ 300 ನಿವೇಶನಗಳಲ್ಲಿ 198 ನಿವೇಶನಗಳನ್ನು ಬಿಡ್ದಾರರು ಬಿಡ್ ಮಾಡಿದ್ದಾರೆ. ನಗರದ ವಿಜಯನಗರದಲ್ಲಿನ 50×80 ವಿಸ್ತೀರ್ಣದ ವಾಣಿಜ್ಯ ನಿವೇಶನವೊಂದು ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಆಗಿದೆ. ಇದರ ಮಾರುಕಟ್ಟೆ ಮೌಲ್ಯ 2.50 ಕೋಟಿ ಆಗಿದ್ದು, ಬಿಡ್ನಲ್ಲಿ ಈ ನಿವೇಶನ 5.40 ಕೋಟಿಗೆ ಹರಾಜಾಗಿದೆ. ವಸಂತನಗರದಲ್ಲಿನ ಒಂದು ಮೂಲೆ ನಿವೇಶನಕ್ಕೆ 47 ಮಂದಿ ಬಿಡ್ ಮಾಡಿದ್ದು, 72 ಲಕ್ಷ ಮೌಲ್ಯದ ನಿವೇಶನವು 1.40 ಕೋಟಿ ರೂ. ಮೊತ್ತಕ್ಕೆ ಬಿಡ್ ಆಗಿದೆ.
ಮುಡಾ ನಿವೇಶನಗಳ ಹರಾಜಿನಿಂದ 140 ಕೋಟಿ ಆದಾಯ ಬಂದಿದೆ ಇನ್ನು ಮುಡಾ ಬಡಾವಣೆಗಳಾದ ವಿಜಯನಗರ, ದಟ್ಟಗಳ್ಳಿ, ಲಲಿತಾದ್ರಿನಗರ, ಶಾಂತವೇರಿ ಗೋಪಾಲಗೌಡನಗರ, ಲಾಲ್ ಬಹಾದ್ದೂರ್ ಶಾಸ್ತ್ರಿ ನಗರ, ಶ್ರೀರಾಂಪುರ, ಆರ್.ಟಿ.ನಗರ ಸೇರಿದಂತೆ ಹಲವಡೆ ನಿವೇಶನಗಳನ್ನು ಬಿಡ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಹಂಚಿಕೆಯಾಗಿ ರದ್ದುಗೊಂಡ ಮಧ್ಯಂತರ ನಿವೇಶಗಳು ಹಾಗೂ ಹರಾಜಿನ ಮೂಲಕ ವಿಲೇವಾರಿಗೆ ಬಾಕಿ ಇದ್ದ ಮೂಲೆ ನಿವೇಶನಗಳನ್ನು ಇ-ಹರಾಜಿನಲ್ಲಿ ವಿಲೇವಾರಿ ಮಾಡಲಾಗಿದೆ.
ಒಟ್ಟಾರೆ ಇ-ಹರಾಜು ಪ್ರಕ್ರಿಯೆಯಿಂದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 198 ನಿವೇಶನಗಳು ಬಿಡ್ ಆಗಿದ್ದು, ಮುಡಾಗೆ 140 ಕೋಟಿ ಆದಾಯ ಬಂದಿದೆ. ಪ್ರಾಧಿಕಾರಕ್ಕೆ ಆದಾಯ ತರುವ ಉದ್ದೇಶದಿಂದ ಇನ್ನು ಎರಡು ತಿಂಗಳಲ್ಲಿ ಇದೇ ರೀತಿ ಹರಾಜಿಗೆ ಯೋಜನೆ ರೂಪಿಸುತ್ತಿದ್ದೇವೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಿ.ಬಿ. ನಟೇಶ್ ಈಟಿವಿ ಭಾರತ್ ಜೊತೆ ದೂರವಾಣಿ ಮೂಲಕ ಮಾಹಿತಿ ನೀಡಿದರು.