ಮೈಸೂರು: ಹಳೇ ವೈಷಮ್ಯದ ಹಿನ್ನೆಲೆ ಕೆಲ ದಿನಗಳ ಹಿಂದೆಯಷ್ಟೆ ಜೈಲಿನಿಂದ ಬಿಡುಗಡೆ ಆಗಿ ಬಂದಿದ್ದ ಅವ್ವ ಮಾದೇಶ್ ಆಪ್ತ ಚಂದು ಅಲಿಯಾಸ್ ಚಂದ್ರಶೇಖರ್ ಎಂಬಾತನನ್ನು ಸ್ಕೂಟರ್ನಲ್ಲಿ ಬಂದ ಆರು ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಮೈಸೂರಿನ ಪಡುವಾರಹಳ್ಳಿಯಲ್ಲಿ ನಡೆದಿದೆ.
ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ:ಮೈಸೂರಿನಲ್ಲಿ ವಿಧಾನಸಭೆಯ ಚುನಾವಣೆ ಮುಗಿಯುತ್ತಿದ್ದಂತೆ ಮತ್ತೆ ರೌಡಿಗಳ ನಡುವೆ ಗ್ಯಾಂಗ್ವಾರ್ ಶುರುವಾದಂತೆ ಕಾಣುತ್ತಿದೆ. ಅದಕ್ಕೆ ಪುಷ್ಟಿ ನೀಡಿದಂತೆ ಇಂದು ಕೆಲ ದಿನಗಳ ಹಿಂದಷ್ಟೇ ಕೇಸ್ ಖುಲಾಸೆಯಾಗಿ ಹೊರ ಬಂದಿದ್ದ ಚಂದು ಅಲಿಯಾಸ್ ಚಂದ್ರಶೇಖರ್ ಎಂಬಾತನನ್ನು, ದ್ವಿ ಚಕ್ರ ವಾಹನಗಳಲ್ಲಿ ಬಂದ ಆರು ಜನ ದುಷ್ಕರ್ಮಿಗಳು ಮಚ್ಚು ಮತ್ತು ಲಾಂಗುಗಳಿಂದ ನಡುರಸ್ತೆಯಲ್ಲಿ ಚಂದ್ರಶೇಖರ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಕೊಲೆಗೆ ಕಾರಣವಾಯಿತೇ ಹಳೇ ವೈಷಮ್ಯ ?:ಜೈಲಿನಿಂದ ಬಿಡುಗಡೆಯಾಗಿ ಬಂದ ಚಂದು ಅಲಿಯಾಸ್ ಚಂದ್ರಶೇಖರ್ ಎಂಬಾತನ ಕೊಲೆಗೆ ಹಳೇ ವೈಷಮ್ಯವೇ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಕೊಲೆಯಾದ ಪಡುವಾರಹಳ್ಳಿಯ ದೇವು ಎಂಬಾತನ ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಕೊಲೆಯಾದ ಚಂದು ಅಲಿಯಾಸ್ ಚಂದ್ರಶೇಖರ್ ಈತ ಮಾಜಿ ನಗರ ಪಾಲಿಕೆ ಸದಸ್ಯ ಅವ್ವ ಮಾದೇಶ್ ಅಪ್ತನಾಗಿದ್ದು,ಈ ಹಿಂದೆ ಈತ ಹುಣಸೂರಿನಲ್ಲಿ ನಡೆದ ಜೋಡಿ ಕೊಲೆಯಲ್ಲಿ ಆರೋಪಿ ಸಹ ಆಗಿದ್ದ ಎನ್ನಲಾಗಿದೆ. ಕೊಲೆಯಾದ ಸ್ಥಳಕ್ಕೆ ನಗರ ಪೋಲಿಸ್ ಕಮಿಷನರ್ ರಮೇಶ್ ಬಾನೋತ್ ಹಾಗೂ ವಿ ವಿ.ಪುರಂ ಠಾಣೆಯ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಕೊಲೆ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.