ಮೈಸೂರು :ಧಾರ್ಮಿಕ ಹಾಗೂ ನೈಸರ್ಗಿಕವಾದ ಹಲವಾರು ಜೀವ ವೈವಿಧ್ಯಗಳಿರುವ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಈ ಯೋಜನೆಯನ್ನು ಪುನರ್‌ಪರಿಶೀಲನೆ ನಡೆಸಿ ಕೈ ಬಿಡುವಂತೆ ಪರಿಸರವಾದಿಗಳು ಮನವಿ ಮಾಡಿದ್ದಾರೆ. ಇಲ್ಲದೇ ಇದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ವಿರೋಧವೇಕೆ?:ನಾಡ ಅಧಿದೇವತೆ ನೆಲೆಸಿರುವ ಚಾಮುಂಡಿ ಬೆಟ್ಟ ಸಾಂಸ್ಕೃತಿಕ ನಗರಿ ಹಾಗೂ ಇಡೀ ಕರುನಾಡಿಗೆ ಕಿರೀಟ ಕಳಸವಿದ್ದಂತೆ. ಬೆಟ್ಟವು 1,673 ಎಕರೆ ವಿಸ್ತೀರ್ಣ ಹೊಂದಿದ್ದು, ಪ್ರಾಕೃತಿಕ ಜೀವ ವೈವಿಧ್ಯತೆಯ ತಾಣ. ಸ್ವಾಭಾವಿಕ ರೀತಿಯ ಬೆಟ್ಟ. ಈ ಬೆಟ್ಟಕ್ಕೆ ಹೋಗಲು ಮೆಟ್ಟಿಲುಗಳೂ ಸೇರಿದಂತೆ ನಾಲ್ಕು ಕಡೆ ವಿಶಾಲವಾದ ರಸ್ತೆಗಳಿವೆ. ಹೀಗಾಗಿ, ರೋಪ್ ವೇ ಏಕೆ ಬೇಕು ಎಂಬುದು ಪರಿಸರವಾದಿಗಳ ಪ್ರಶ್ನೆ. ರೋಪ್ ವೇ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ್ದಾರೆ. ಇದು ಮೈಸೂರಿನ ಪರಿಸರ ಪ್ರೇಮಿಗಳು ಹಾಗೂ "ಚಾಮುಂಡಿ ಬೆಟ್ಟ ಉಳಿಸಿ" ಹೋರಾಟ ಸಮಿತಿಯ ವಿರೋಧಕ್ಕೆ ಕಾರಣವಾಗಿದೆ.
ಕಳೆದ ವರ್ಷ ರಾಜ್ಯ ಬಜೆಟ್ನಲ್ಲಿ ಯೋಜನೆಯ ಬಗ್ಗೆ ಪ್ರಸ್ತಾಪ ಆಗುತ್ತಿದ್ದಂತೆ ಇಲ್ಲಿನ ಪರಿಸರ ಪ್ರೇಮಿಗಳು, ವನ್ಯಜೀವಿ ತಜ್ಞರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಬೆಟ್ಟಕ್ಕೆ ರೋಪ್ ವೇ ಬಂದರೆ ಅಪಾಯ ಎಂದು ಸಹಿ ಸಂಗ್ರಹ ಚಳವಳಿ ಆರಂಭಿಸಿದ್ದರು. ಸುಮಾರು 70 ಸಾವಿರ ಆನ್‌ಲೈನ್ ಸಹಿ ಸಂಗ್ರಹಿಸಿ ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ಇಲ್ಲದೆಯೇ ಹೆಚ್ಚು ಜನರು ಭೇಟಿ ನೀಡುತ್ತಾರೆ. ಉತ್ತಮ ರಸ್ತೆಗಳಿವೆ. ಆದ್ದರಿಂದ ರೋಪ್ ವೇ ಅವಶ್ಯಕತೆ ಇಲ್ಲ ಎಂದಿದ್ದರು. ಪ್ರಧಾನಿಗೂ ಪತ್ರ ಬರೆದು ವಿರೋಧ ವ್ಯಕ್ತಪಡಿಸಿದ್ದರು.