ಮೈಸೂರು :ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಎಂಬ ಕಾರ್ಯಕ್ರಮ ಅಂಗವಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಶನಿವಾರ ಹುಣಸೂರು ತಾಲೂಕಿನ ತರೀಕಲ್ಲು ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದಾರೆ.
ಈ ವೇಳೆ ರಸ್ತೆ, ಚರಂಡಿ ನಿರ್ಮಾಣ, ಕುಡಿಯುವ ನೀರು, ವಸತಿ, ಸ್ಮಶಾನಕ್ಕೆ ಬೇಲಿ, ಸಮುದಾಯ ಭವನಕ್ಕೆ ಅನುದಾನ, ದೇವಸ್ಥಾನದ ಪುನರುಜ್ಜೀವನಗೊಳಿಸುವಿಕೆ ಮುಂತಾದ ವಿಷಯಗಳ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನ ಸೆಳೆದರು.
ತರೀಕಲ್ಲು ಗ್ರಾಮದಲ್ಲಿ ಡಿಸಿ ರೋಹಿಣಿ ಸಿಂಧೂರಿ.. ತರೀಕಲ್ಲು ಗ್ರಾಮದ ರಂಗಯ್ಯನಕೊಪ್ಪಲು ಹಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಯಾರಿಗೂ ಪೌತಿ ಖಾತೆ ಆಗುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.
ಮರಣ ಪ್ರಮಾಣ ಪತ್ರ ಮಾಡಿಸಿಕೊಂಡಿಲ್ಲದ ಕಾರಣ ಪೌತಿ ಆಗುತ್ತಿಲ್ಲ ಎಂದು ತಹಶೀಲ್ದಾರ್ ಮಾಹಿತಿ ನೀಡಿದಾಗ, ಒಂದು ದಿನ ವಿಶೇಷ ಕ್ಯಾಂಪ್ ನಡೆಸಿ ಗ್ರಾಮಸ್ಥರ ಸಮ್ಮುಖದಲ್ಲಿ ಸಭೆ ನಡೆಸಿ, ಮರಣ ಪ್ರಮಾಣ ಪತ್ರ ನೀಡಿ, ನಂತರ ಪೌತಿ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.