ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಹೋಟೆಲ್ ಸರ್ವರ್ ಆಗಿ ರೋಬೋಟ್ ಮಹಿಳೆ ಬಂದ ಬೆನ್ನಲ್ಲೇ ಇದೀಗ ಶಾಲೆಯಲ್ಲಿ ಪಾಠ ಮಾಡಲು ರೋಬೋಟ್ ಟೀಚರ್ ಬಂದಿದೆ. ಇದು ಹೇಗೆ ಪಾಠ ಮಾಡುತ್ತದೆ, ಇದರ ವಿಶೇಷತೆಗಳೇನು? ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ. ನಗರದ ಶಾಂತಲಾ ವಿದ್ಯಾಪೀಠದಲ್ಲಿ ರೋಟೋಟ್ ಲ್ಯಾಬ್ ನಿರ್ಮಾಣ ಮಾಡಲಾಗಿದ್ದು, ಶಿಕ್ಷಕರಂತೆ ರೋಬೋಟ್ ಕೂಡ ಪಾಠ ಮಾಡಿ ಮಕ್ಕಳನ್ನು ಆಕರ್ಷಿಸುತ್ತಿದೆ.
ಶಾಂತಲಾ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೋಬೋಟ್ ಲ್ಯಾಬ್ ನಿರ್ಮಾಣಗೊಂಡಿದ್ದು, ಮಕ್ಕಳ ಆಸಕ್ತಿ ಮತ್ತು ಕುತೂಹಲವನ್ನು ಹೆಚ್ಚಿಸಿದೆ. ಕೇಂದ್ರೀಯ ಪಠ್ಯಕ್ರಮದ ಸಂಸ್ಥೆಯಲ್ಲಿ ಎಲ್ಕೆಜಿ ಯಿಂದ ಹತ್ತನೇ ತರಗತಿಯವರೆಗೆ ಸುಮಾರು ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅವರ ತರಗತಿಗಳಿಗೆ ಅನುಗುಣವಾಗಿ ರೋಬೋಟ್ಗೆ ಕಾರ್ಯಕ್ರಮವನ್ನು ರೂಪಿಸಲಾಗಿದೆ.
ಎಲ್ಕೆಜಿ ಇಂದ 2ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಡು, ಕಥೆ ಮನರಂಜನೆಯ ಮೂಲಕ ಅಕ್ಷರಭ್ಯಾಸ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಲಾಗಿದೆ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ತಕ್ಕಂತೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡಲಾಗುತ್ತದೆ. ಪ್ರೌಢಶಾಲಾ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟಕ್ಕೆ ತಕ್ಕಂತೆ ಬೋಧನೆಯ ಜೊತೆಗೆ ನಾನಾ ಬಗೆಯ ಪ್ರಾಯೋಗಿಕ ಚಟುವಟಿಕೆಗಳನ್ನು ಚಿತ್ರ ಸಹಿತ ವಿವರಿಸಿ, ಅವುಗಳನ್ನು ವಿದ್ಯಾರ್ಥಿಗಳೇ ಮಾಡುವಂತೆ ಪ್ರೇರೇಪಿಸುತ್ತದೆ.
ರೋಬೋಟ್ ಹೇಳಿಕೊಡುವ ಪ್ರಯೋಗಗಳನ್ನು ಮಾಡಲು ಹಾಗೂ ಅದಕ್ಕಾಗಿ ಪ್ರತ್ಯೇಕವಾಗಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ. ಒಂದೆರಡು ದಿನಗಳಲ್ಲಿಯೇ ರೋಬೋಟ್ ಪಾಠ ಕೇಳಿದ ವಿದ್ಯಾರ್ಥಿಗಳು ಹಲವಾರು ಪ್ರಾಜೆಕ್ಟ್ ಗಳನ್ನು ಸಿದ್ಧಪಡಿಸಿದ್ದಾರೆ. ರೋಬೋಟ್ ಮುಖದಲ್ಲಿ ಅಳವಡಿಸಿರುವ 86 ಸೆಂ.ಮೀ ಸ್ಕ್ರೀನ್ನಲ್ಲಿ ಮುಖಭಾವದ ಚಿತ್ರಗಳನ್ನ ತೋರಿಸುವುದಲ್ಲದೆ ಮಾತು, ಹಾಡಿಗೆ ತಕ್ಕಂತೆ ಕೈಗಳನ್ನು ಚಲಿಸುವುದರಿಂದ ಶಿಕ್ಷಕರು ನಮ್ಮ ಮುಂದೆ ನಿಂತು ಮಾತನಾಡುತ್ತಿದ್ದಾರೆ ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸುತ್ತದೆ. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರತ್ಯುತ್ತರ ನೀಡುವ ರೋಬೋಟ್ ಎಲ್ಲರ ಗಮನವನ್ನ ಸೆಳೆಯುತ್ತಿದೆ.
ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಕಾ ಮಟ್ಟವನ್ನ ಹೆಚ್ಚಿಸಲು ನೆರವಾದ ರೋಬೋ ಟೀಚರ್..ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳ ಜೊತೆಗೆ ಹಿಂದುಳಿದ ವಿದ್ಯಾರ್ಥಿಗಳಿಗೂ ಕೂಡ ಈ ರೋಬೋಟ್ ಪಾಠ ಅವರ ಕೌಶಲ ಮತ್ತು ಕಲಿಕಾ ಮಟ್ಟವನ್ನು ಹೆಚ್ಚಿಸಲು ನೆರವಾಗಿದೆ. ರೋಬೋಟ್ ಲ್ಯಾಬ್ ಕಲಿಕೆಗಾಗಿ ಒಂದೊಂದು ತರಗತಿಗೆ 45 ನಿಮಿಷಗಳನ್ನು ಮೀಸಲಿಡಲಾಗಿದ್ದು, ಕೊಠಡಿಯಲ್ಲಿಯೇ ಪ್ರತ್ಯೇಕ ಜಾಗ ಬಿಟ್ಟು ಪ್ರತಿಯೊಬ್ಬರೂ ಪ್ರಾಜೆಕ್ಟ್ ನಲ್ಲಿ ಭಾಗವಹಿಸಲು ಪ್ರೇರೇಪಿಸಲಾಗುತ್ತದೆ.