ಮೈಸೂರು:ವಿದ್ಯುತ್ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗಿದೆ. ಬೆಲೆ ಏರಿಕೆಯನ್ನು ಪ್ರಸ್ತುತ ಸರ್ಕಾರ ಮಾಡಿದೆ ಎಂದು ತಿಳಿದುಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಬೆಲೆ ಏರಿಕೆ ಆದೇಶವನ್ನು ಮರು ಪರಿಶೀಲನೆ ಮಾಡಬೇಕು. ಜನಸಾಮಾನ್ಯರಿಗೆ ಹೊರೆಯಾಗದ ರೀತಿ ವಿದ್ಯುತ್ ಬೆಲೆಯನ್ನು ನಿಗದಿಗೊಳಿಸಬೇಕು ಮೈಸೂರು ನಗರದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರು ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದು ಮನವಿ ಮಾಡಿದ್ದಾರೆ.
ಈಗಾಗಲೇ ಜನಸಾಮಾನ್ಯರು, ಹೋಟೆಲ್ ಉದ್ಯಮಿಗಳು ಹಾಗೂ ಕೈಗಾರಿಕೋದ್ಯಮಿಗಳು ವಿದ್ಯುತ್ ಬೆಲೆ ಏರಿಕೆ ಕುರಿತಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹೊಸ ಸರ್ಕಾರ ಮಾಡಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ಎಲ್ಲ ವಿದ್ಯುತ್ ನಿಗಮಗಳಲ್ಲಿ, 2023 ಏಪ್ರಿಲ್ನಿಂದ ಪೂರ್ವ ಅನ್ವಯವಾಗುವಂತೆ ವಿದ್ಯುತ್ ದರಗಳನ್ನು ಏರಿಕೆ ಮಾಡಲಾಗಿದೆ. ಈಗಾಗಲೇ ಹಿಂದಿನ ಸರ್ಕಾರದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಉಚಿತವಾಗಿ 200 ಯುನಿಿಟ್ ವಿದ್ಯುತ್ ನೀಡಿ, ಇದನ್ನು ಬೆಲೆ ಏರಿಕೆ ಮೂಲಕ ಕಿತ್ತುಕೊಂಡಂತಾಗಿದೆ ಎಂಬ ಭಾವನೆ ಜನರಲ್ಲಿದೆ.
ಇದರಿಂದ ಕಾಂಗ್ರೆಸ್ ಪಕ್ಷದ ಇಮೇಜಿಗೆ ಧಕ್ಕೆ ಆಗುತ್ತಿದೆ. ಇದರ ಬಗ್ಗೆ ಹಾಗೂ ಜನಸಾಮಾನ್ಯರಿಗೆ ವಿದ್ಯುತ್ ಬೆಲೆ ಏರಿಕೆಯನ್ನು ಈಗಿನ ಸರ್ಕಾರ ಮಾಡಿದೆ ಎಂಬ ಭಾವನೆ ಉಂಟಾಗುತ್ತಿದೆ. ಇದರಿಂದ ಪಕ್ಷಕ್ಕೆ ಧಕ್ಕೆಯಾಗುತ್ತಿದೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ವಿದ್ಯುತ್ ಬೆಲೆ ಏರಿಕೆ ಆದೇಶವನ್ನು ಮರುಪರಿಶೀಲಿಸಿ, ಜನರಿಗೆ ತೊಂದರೆ ಆಗದ ರೀತಿ ಜಾರಿ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಮಾಜಿ ಮಂತ್ರಿ ತನ್ವೀರ್ ಸೇಠ್ ಒತ್ತಾಯಿಸಿದ್ದಾರೆ.