ಮೈಸೂರು:ಕೆಆರ್ಎಸ್ ಅಣೆಕಟ್ಟು ನಿರ್ಮಾಣವಾಗಿ 85 ವರ್ಷ ಕಳೆದರೂ, ಇದಕ್ಕೆ ಸಂಬಂಧಿಸಿದ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ನಿವೃತ್ತ ತಹಶೀಲ್ದಾರ್ ಬದರಿನಾಥ್ ಹೇಳಿದ್ದಾರೆ.
ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದಿನ ಮೈಸೂರು - ಮದ್ರಾಸ್ ಸರ್ಕಾರದ ಒಪ್ಪಂದದಂತೆ ಕೆಆರ್ಎಸ್ ಅಣೆಕಟ್ಟೆಯಿಂದ 1,25,000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ನೀಡಬೇಕಿತ್ತು. ಆದರೆ, ಈಗ ಕೇವಲ 96,419 ಎಕರೆ ಮಾತ್ರ ನೀರಾವರಿ ಪ್ರದೇಶವಾಗಿದೆ. ಇದುವರೆಗೂ ಸಹ ಉಳಿದ 28,581 ಎಕರೆ ಪ್ರದೇಶಕ್ಕೆ ನೀರು ಕೊಟ್ಟಿಲ್ಲ ಎಂದರು.
ಈ ಯೋಜನೆ ಇನ್ನೂ ಪೂರ್ಣವಾಗದಿದ್ದರೂ ಕೂಡ ಶ್ರೀರಂಗಪಟ್ಟಣದಲ್ಲಿ ವಿದ್ಯುತ್ ಪವರ್ ಜನರೇಟಿಂಗ್ ಯೂನಿಟ್ ಮಾಡಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ನಿರಂತರವಾಗಿ ನೀರು ಹರಿಸುವುದರಿಂದ ಕೆಆರ್ಎಸ್ ಅಣೆಕಟ್ಟೆಯಲ್ಲಿ ನೀರು ಸಂಗ್ರಹ ಕಡಿಮೆಯಾಗುತ್ತದೆ. ಅಲ್ಲದೇ ಇದರಿಂದ ನೀರಾವರಿ ಪ್ರದೇಶಗಳಿಗೆ ತೊಂದರೆಯಾಗಲಿದೆ ಎಂದು ತಿಳಿಸಿದರು.
ವಿದ್ಯುತ್ ಉತ್ಪಾದನೆಗೆ ಬಿಡಲಾಗುವ ನೀರು ತಮಿಳುನಾಡಿಗೆ ಸೇರುತ್ತದೆ. ಹಾಗಾಗಿ ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಅಲ್ಲದೇ ನಂಜನಗೂಡು ಭಾಗದ ಕೆರೆಗಳನ್ನು ಅಭಿವೃದ್ಧಿಪಡಿಸಿದಲ್ಲಿ ಕೆಆರ್ಎಸ್ನಲ್ಲಿ ನೀರು ಉಳಿತಾಯವಾಗಲಿದೆ. ಅಣೆಕಟ್ಟಿನಲ್ಲಿ ಉಳಿತಾಯದ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡಬಹುದು ಎಂದು ಹೇಳಿದರು.