ಮೈಸೂರು:ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಮೇಜರ್ ಜನರಲ್ ಸಿ ಕೆ ಕರುಂಬಯ್ಯ(88) ಅವರು ಮೈಸೂರಿನ ತಾಲೂಕಿನ ಹೆಮ್ಮನಹಳ್ಳಿಯ ಅವರ ತೋಟದ ಮನೆಯಲ್ಲಿ ಗುರುವಾರ ನಿಧನರಾದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅವರು ಇದ್ದಾರೆ. ವಿಜಯನಗರದಲ್ಲಿರುವ ಚಿತಾಗಾರದಲ್ಲಿ ಶುಕ್ರವಾರ (ಜ.5) ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿ ಕೆ ಕರುಂಬಯ್ಯ ಶಿಕ್ಷಣ : ಮಡಿಕೇರಿಯಲ್ಲಿ 1936ರ ಡಿ.3ರಂದು ಡಾ. ಸಿ ಬಿ ಕಾರಿಯಪ್ಪ ಪುತ್ರರಾಗಿ ಕರುಂಬಯ್ಯ ಜನಿಸಿದ್ದರು. ಅವರು ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಅವರ ಹತ್ತಿರದ ಸಂಬಂಧಿ ಎನ್ನಲಾಗಿದೆ. ಮಡಿಕೇರಿಯ ಸೆಂಟ್ರಲ್ ಪ್ರೌಢಶಾಲೆ, ಸರ್ಕಾರಿ ಕಾಲೇಜಿನಲ್ಲಿ ಶಿಕ್ಷಣ ಪಡೆದ ಅವರು, 1957ರಲ್ಲಿ ಡೆಹ್ರಾಡೂನ್ ನ ಭಾರತೀಯ ಮಿಲಿಟರಿ ಅಕಾಡೆಮಿಗೆ ಸೇರ್ಪಡೆಗೊಂಡರು.
ರಾಷ್ಟ್ರಪತಿ ಗೌರವ, ಸೇನಾ ಪದಕ ಪಡೆದ ಸಿ ಕೆ ಕರುಂಬಯ್ಯ :ತಮ್ಮ ವೃತ್ತಿ ಜೀವನವನ್ನು ಮರಾಠ ಲಘು ಪದಾತಿದಳದ 5ನೇ ಬೆಟಾಲಿಯನ್ನಲ್ಲಿ ಆರಂಭಿಸಿದರು. ನಾಗಾಲ್ಯಾಂಡ್, ಮಿಜೋರಾಂ,ತ್ರಿಪುರಾದ ಸೇನೆ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡಿದ್ದರು. 1965ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ರಾಜಸ್ಥಾನ ಗಡಿಯಲ್ಲಿ ಹೋರಾಟ ನಡೆಸಿ ಪಾಕ್ನ ಹಲವು ಗ್ರಾಮಗಳನ್ನು ವಶಪಡಿಸಿಕೊಂಡಿದ್ದರು.