ಮೈಸೂರು: ಮೊದಲು ಯಾವುದೋ ಖಾಸಗಿ ವ್ಯಕ್ತಿಗಳಿಗಿಂತ ಸರ್ಕಾರದ ಒಳಗಿದ್ದುಕೊಂಡು ಲಂಚ ಸ್ವೀಕರಿಸುವವರ ವಿರುದ್ಧ ಕ್ರಮ ಆಗಬೇಕು. ಅದಕ್ಕಾಗಿ ಲೋಕಾಯುಕ್ತ ಕಾಯ್ದೆಯಲ್ಲಿ ಕೆಲವು ನಿಯಮಗಳನ್ನು ಬದಲಾವಣೆ ಮಾಡಬೇಕಾಗಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿಕೆ ನೀಡಿದ್ದಾರೆ.
ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಅವರು, ಮಾಧ್ಯಮಗಳ ಜೊತೆ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಭ್ರಷ್ಟಾಚಾರ ಎಂಬುದು ಮೊದಲು ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸಮಾಜದ ವಿವಿಧ ವಲಯಗಳಲ್ಲಿ ಮೊದಲಿಗಿಂತಲು ಭ್ರಷ್ಟಾಚಾರ ವ್ಯಾಪಕವಾಗಿದೆ. ಅತಿಯಾದ ದುರಾಸೆಯಿಂದ ಈಗ ಭ್ರಷ್ಟಾಚಾರ ಹೆಚ್ಚಾಗಿದ್ದು, ಮೊದಲು ಆಸೆ ಮತ್ತು ದುರಾಸೆ ಇತ್ತು. ಈಗ ದುರಾಸೆ ಎಂಬುದು ಹೆಚ್ಚಾಗಿದೆ. ಇದು ಭ್ರಷ್ಟಾಚಾರ ಹೆಚ್ಚಾಗಲು ಕಾರಣವಾಗಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದರು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರತಿಕ್ರಿಯೆ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಪುನರ್ ಜಾರಿಗೊಳಿಸಿರುವುದು ಒಳ್ಳೆಯ ಬೆಳವಣಿಗೆ. ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಜಾರಿಗೆ ತಂದಿದ್ದಕ್ಕಾಗಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ ಎಸಿಬಿ ರದ್ದುಗೊಳಿಸಿದ ನಿರ್ಧಾರವನ್ನು ಕೋರ್ಟ್ ಎತ್ತಿ ಹಿಡಿಯಿತು. ಈಗ ಲೋಕಾಯುಕ್ತಕ್ಕೆ ಬಲ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ಲೋಕಾಯುಕ್ತ ಕೇಳುವ ಸಿಬ್ಬಂದಿಯನ್ನು ಸರ್ಕಾರ ನೇಮಿಸಬೇಕು. ಭ್ರಷ್ಟಾಚಾರ ವಿರುದ್ಧ ಹೋರಾಟದ ಸಾಮರ್ಥ್ಯ ಲೋಕಾಯುಕ್ತಕ್ಕಿದೆ ಎಂದರು.
ಯಾವುದೋ ಖಾಸಗಿ ವ್ಯಕ್ತಿಗಳಿಗಿಂತ ಸರ್ಕಾರದ ಒಳಗಿದ್ದುಕೊಂಡು ಲಂಚ ಸ್ವೀಕರಿಸುವವರ ವಿರುದ್ಧ ಕ್ರಮ ಆಗಬೇಕು. ಇದಕ್ಕಾಗಿ ಲೋಕಾಯುಕ್ತದಲ್ಲಿ ಕೆಲವು ನಿಯಮ ಬದಲಾಗಬೇಕಿದೆ. ಲೋಕಾಯುಕ್ತ ಬಲಪಡಿಸಲು ಎಲ್ಲ ರೀತಿಯ ಅವಕಾಶವಿದೆ. ಸರ್ಕಾರಕ್ಕೂ ಸಮಯಾವಕಾಶ ಅಗತ್ಯವಿದೆ. ಕಾಲಾವಕಾಶ ಕೊಟ್ಟು ನೋಡೋಣ ಎಂದು ತಿಳಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ಖರ್ಗೆ, ಶಶಿ ತರೂರ್, ಸೋನಿಯಾರಿಂದ ಮತದಾನ