ಕರ್ನಾಟಕ

karnataka

ETV Bharat / state

ನಿವೃತ್ತ ಐಬಿ ಅಧಿಕಾರಿ ಕೊಲೆ ಪ್ರಕರಣ: ಪಕ್ಕದ ಮನೆಯವರ ವಿರುದ್ಧ ಅಳಿಯನಿಂದ ದೂರು - ನಿವೃತ್ತ ಕೇಂದ್ರದ ಗುಪ್ತಚರ ಇಲಾಖೆ

ನಿವೃತ್ತ ಐಬಿ ಅಧಿಕಾರಿ ಆರ್​ ಎನ್​ ಕುಲಕರ್ಣಿ ಅವರ ಮಗಳು, ಅಳಿಯ ವಿದೇಶದಿಂದ ಮೈಸೂರಿಗೆ ಬಂದಿದ್ದು, ಮಾವನ ಕೊಲೆ ವಿಚಾರಕ್ಕೆ ಅಳಿಯ ಪಕ್ಕದ ಮನೆಯವರ ಮೇಲೆ ದೂರು ನೀಡಿದ್ದಾರೆ.

retired ib officer murder case
ನಿವೃತ್ತ ಐಬಿ ಅಧಿಕಾರಿ ಕೊಲೆ ಪ್ರಕರಣ

By

Published : Nov 7, 2022, 11:46 AM IST

ಮೈಸೂರು: ಕೇಂದ್ರದ ನಿವೃತ್ತ ಗುಪ್ತಚರ ಇಲಾಖೆಯ ಅಧಿಕಾರಿಯನ್ನು ಅಪಘಾತದ ರೀತಿಯಲ್ಲಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಅಳಿಯ ಪಕ್ಕದ ಮನೆಯವರ ಮೇಲೆ ದೂರು ದಾಖಲಿಸಿದ್ದಾರೆ. ಈ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ನವೆಂಬರ್ 4 ರಂದು ಮಾನಸ ಗಂಗೋತ್ರಿಯ ಆವರಣದಲ್ಲಿ ನಿವೃತ್ತ ಕೇಂದ್ರ ಗುಪ್ತಚರ ವಿಭಾಗದ ಅಧಿಕಾರಿಯಾಗಿದ್ದ ಆರ್ ಎನ್ ಕುಲಕರ್ಣಿ ಅವರಿಗೆ ನೋಂದಣಿ ಸಂಖ್ಯೆಯಿಲ್ಲದ ಕಾರೊಂದು ಗುದ್ದಿ ಪರಾರಿಯಾಗಿತ್ತು. ಈ ಸಂಬಂಧ ನ.5 ರಂದು ಪೊಲೀಸರು ಕ್ಯಾಂಪಸ್​ನಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದಾಗ ಇದೊಂದು ಕೊಲೆ ಎಂದು ಶಂಕಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.

ಅಳಿಯನಿಂದ ದೂರು:ಕುಲಕರ್ಣಿ ಅವರ ಮಗಳು ಪರಿಣಿತ ಅವರ ಗಂಡ ಸಂಜಯ ಅಂಗಡಿ ಅವರು ತಮ್ಮ ಮಾವನ ಸಾವು ಅಪಘಾತವಲ್ಲ, ಕೊಲೆ ಎಂದು ನ.5 ರಂದು ಜಯಲಕ್ಷ್ಮೀ ಪುರಂ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ನಮ್ಮ ಮಾವ ವಾಸವಿರುವ ಮೈಸೂರಿನ ಟಿ ಕೆ ಲೇಔಟ್​ನ ಮನೆಯ ದಕ್ಷಿಣ ಭಾಗದಲ್ಲಿ ಮಾದಪ್ಪ ಎಂಬುವವರು ಮನೆ ನಿರ್ಮಾಣ ಮಾಡುತ್ತಿದ್ದು, ಈ ಮನೆಯನ್ನು ಕಾನೂನು ಬಾಹಿರವಾಗಿ ಕಟ್ಟುತ್ತಿದ್ದಾರೆ ಎಂದು ನಗರ ಪಾಲಿಕೆಗೆ ದೂರು ಸಲ್ಲಿಸಿದ್ದರು.

ಆದರೆ ನಗರ ಪಾಲಿಕೆಯವರು ಈ ಬಗ್ಗೆ ಗಮನಹರಿಸದೇ ಇದ್ದಾಗ ನ್ಯಾಯಾಲಯದಲ್ಲಿ ನಗರ ಪಾಲಿಕೆ ವಿರುದ್ಧ ದೂರು ದಾಖಲಿಸಿದ್ದು, ಮಾದಪ್ಪ ಮನೆ ಕಟ್ಟದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಈ ತಡೆಯಾಜ್ಞೆಯ ವಿರುದ್ಧ ಮಾದಪ್ಪ ಹೈ ಕೋರ್ಟ್ ಮೊರೆ ಹೋಗಿದ್ದು, ಅಲ್ಲಿ ನನ್ನ ವಿರುದ್ಧ ಆದೇಶವಾದರೆ ಮನೆಯನ್ನು ಒಡೆಯುತ್ತೇವೆ ಎಂದು ಹೇಳಿದ್ದರು.

ಈ ವಿಚಾರದಲ್ಲಿ ಕೊಲೆಯಾದ ನನ್ನ ಮಾವ, ವಿದೇಶದಲ್ಲಿರುವ ಮಗಳು ಮತ್ತು ನನ್ನ ಜೊತೆ ವಿಡಿಯೋ ಕಾಲ್​ನಲ್ಲಿ ಮಾತನಾಡುವಾಗ, ಪಕ್ಕದ ಮನೆಯವರು ಮನೆ ನಿರ್ಮಾಣ ಮಾಡುತ್ತಿರುವ ಮಾದಪ್ಪ ಮತ್ತು ಮಕ್ಕಳು ಸಾಕಷ್ಟು ಬಾರಿ ನನ್ನನು ಕೊಲೆ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎಂದು ಹೇಳುತ್ತಿದ್ದರು. ಈ ವಿಚಾರದಲ್ಲಿ ನನ್ನ ಮಾವ ಸ್ಥಳೀಯ ಪೊಲೀಸ್ ಠಾಣೆ, ಪೊಲೀಸ್ ಆಯುಕ್ತರು ಹಾಗೂ ಪ್ರಧಾನ ಮಂತ್ರಿಯವರಿಗೆ ತನ್ನ ಪ್ರಾಣಕ್ಕೆ ಅಪಾಯವಿದೆ ಎಂದು ದೂರು ನೀಡಿದ್ದರು ಎಂದು ಅಳಿಯ ಸಂಜಯ್ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಮಧ್ಯೆ ಪಕ್ಕದಲ್ಲೇ ಮನೆ ಕಟ್ಟುತ್ತಿದ್ದ ಮಾದಪ್ಪ ಕಾನೂನು ಉಲ್ಲಂಘನೆ ಮಾಡಿ ಮನೆ ಕಟ್ಟುತ್ತಿದ್ದಾರೆ ಎಂದು ಕಳೆದ ಜೂನ್​ನಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಆಯುಕ್ತರು ಈ ಬಗ್ಗೆ ಕ್ರಮ ಕೈಗೊಂಡಿರಲಿಲ್ಲ. ಇದನ್ನು ಮತ್ತೆ ಪ್ರಶ್ನಿಸಿ ಆಯುಕ್ತರ ವಿರುದ್ಧ ಹಾಗೂ ಪಾಲಿಕೆಯ ವಿರುದ್ಧ ರಿಟ್ ಅರ್ಜಿ ಸಲ್ಲಿಸಿದ್ದರು. ಈ ನಡುವೆ ನ.2 ರಂದು ಮಾದಪ್ಪ ಕಟ್ಟುತ್ತಿರುವ ಮನೆ ಕಾನೂನು ಬಾಹಿರವಾಗಿದ್ದು, ಒತ್ತುವರಿಯಾಗಿರುವ ಮತ್ತು ಅಕ್ರಮವಾಗಿ ಕಟ್ಟಿರುವ ಭಾಗಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ಮಾಡಿತ್ತು.

ಈ ಆದೇಶದ ಹಿನ್ನೆಲೆಯಲ್ಲಿ ಮಾದಪ್ಪ ಮತ್ತು ಅವರ ಮಕ್ಕಳ ಜೊತೆಗೆ ಆತನ ಸಹಚರರು ನಮ್ಮ ಮಾವನನ್ನು ಕೊಲೆ ಮಾಡಿದ್ದಾರೆ ಎಂದು ಅಳಿಯ ಸಂಜಯ್ ಅಂಗಡಿ ದೂರು ನೀಡಿದ್ದಾರೆ.

ಪೊಲೀಸರಿಂದ ಮೂವರ ವಿಚಾರಣೆ:ದೂರಿನ ಹಿನ್ನೆಲೆಯಲ್ಲಿ ಪಕ್ಕದ ಮನೆಯ ಮಾದಪ್ಪ ಅವರ ಮಕ್ಕಳು ಹಾಗೂ ಸಹಚರರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದು, ಇಲ್ಲಿಯವರೆಗೆ ಯಾವುದೇ ಮಾಹಿತಿ ನೀಡಿಲ್ಲ. ಈ ನಡುವೆ ಇಂದು ವಿದೇಶದಲ್ಲಿದ್ದ ಮಕ್ಕಳು ಮೈಸೂರಿಗೆ ಬಂದಿದ್ದು, ಕುಲಕರ್ಣಿ ಅಂತ್ಯಕ್ರಿಯೆ ಇಂದು ನಡೆಯಲಿದೆ.

ಇದನ್ನೂ ಓದಿ:ಮಾನಸ ಗಂಗೋತ್ರಿ ಆವರಣದಲ್ಲಿ ಕಾರು ಡಿಕ್ಕಿ ಹೊಡೆಸಿ ನಿವೃತ್ತ ಇಂಟೆಲಿಜೆನ್ಸ್ ಅಧಿಕಾರಿ ಕೊಲೆ

ABOUT THE AUTHOR

...view details