ಮೈಸೂರು: ಕುಲಪತಿಗಳ ಆಯ್ಕೆ ವಿಚಾರದಲ್ಲಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ನೀಡಿದ್ದರಿಂದ ಪಿಂಚಣಿಗೆ ಸಮಸ್ಯೆ ಆಗಿದ್ದು, ಇದನ್ನು ಖಂಡಿಸಿ ನಿವೃತ್ತ ನೌಕರರು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ, ತೆರವಾಗಿರುವ ಕುಲಪತಿ ಸ್ಥಾನಕ್ಕೆ ಹಂಗಾಮಿ ಕುಲಪತಿ ನೇಮಕವಾಗದ ಹಿನ್ನೆಲೆಯಲ್ಲಿ, ವಿವಿಯ ನಿವೃತ್ತ 1015 ನೌಕರರ ಪಿಂಚಣಿ ಹಣಕ್ಕೆ ತೊಂದರೆಯಾಗಿದೆ.
ಕೂಡಲೇ ಪಿಂಚಣಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕ್ರಾಫರ್ಡ್ ಭವನದ ಮುಂಭಾಗದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ನಿವೃತ್ತ ನೌಕರರು, ಎರಡು ದಿನದ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ನೌಕರರಿಗೂ ವೇತನ ವಿಳಂಬ:ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 3 ಸಾವಿರಕ್ಕೂ ಹೆಚ್ಚು ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳಿಗೂ ಜೂನ್ ತಿಂಗಳ ವೇತನ ಸಿಗದೇ ಕಂಗಾಲಾಗಿದ್ದಾರೆ. ಕುಲಪತಿಗಳ ಸಹಿ ಇಲ್ಲದೇ ಕುಲಸಚಿವರು ಹಾಗೂ ಹಣಕಾಸು ಅಧಿಕಾರಿಗಳು ವೇತನ ಪಾವತಿ ಮಾಡಲು ಕಷ್ಟವಾಗಿದೆ. ವೇತನ ಪಾವತಿಗೆ ಹಂಗಾಮಿ ಕುಲಪತಿಗಳ ನೇಮಕವಾಗದ ಹೊರತು ಖಾಯಂ ಸಿಬ್ಬಂದಿಗಳಿಗೂ ವೇತನ ವಿಳಂಬವಾಗಲಿದೆ. ಅದರಲ್ಲಿ 800 ಮಂದಿ ಖಾಯಂ ಅಧ್ಯಾಪಕರು, 900 ಮಂದಿ ಅತಿಥಿ ಉಪನ್ಯಾಸಕರು, 1600 ಭೋಧಕೇತರ ಸಿಬ್ಬಂದಿ ಕೆಲಸ ಮಾಡುತ್ತಿದ್ದು. ಪ್ರತಿ ತಿಂಗಳು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಸುಮಾರು 6.25 ಕೋಟಿ ವೇತನ ಪಾವತಿಸಬೇಕಾಗಿದೆ. ವೇತನ ಪಾವತಿಗೆ ಕುಲಪತಿಗಳ ಸಹಿ ಅಗತ್ಯವಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಂಡಿದ್ದ ಪ್ರೊ.ಎಂ ಕೆ.ಲೋಕನಾಥ್ ಅವರ ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ 15 ದಿನ ಕಳೆದಿದೆ. ಆದರೆ ಇನ್ನೂ ಹಂಗಾಮಿ ಕುಲಪತಿಗಳನ್ನ ನೇಮಕಾತಿ ಮಾಡಲಾಗಿಲ್ಲ. ಕೂಡಲೇ ರಾಜ್ಯಪಾಲರು ಹಂಗಾಮಿ ಕುಲಪತಿಯನ್ನ ನೇಮಿಸಿ, ಸಮಸ್ಯೆ ಬಗೆಹರಿಸಬೇಕೆಂದು ಪಿಂಚಣಿ ನೌಕರರ ಸಂಘದ ಪ್ರೊ.ರಂಗರಾಜ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ:Basavaraj Bommai: ಸಿಎಂ ಕಚೇರಿಯಲ್ಲಿ ಸಣ್ಣ ಹುದ್ದೆಗೆ ₹ 30 ಲಕ್ಷ, ದೊಡ್ಡ ಹುದ್ದೆಗೆ ಕೋಟಿ ಕೋಟಿ ಇದೆ: ಮಾಜಿ ಸಿಎಂ ಬೊಮ್ಮಾಯಿ
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗಿಳಿದ ಶಿಕ್ಷಕರು, ರೈತರು:ಹೊಸ ಸರ್ಕಾರದ ಜಂಟಿ ಹಾಗೂ ಬಜೆಟ್ ಅಧಿವೇಶನ ಆರಂಭವಾಗುತ್ತಿದ್ದಂತೆ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗಳ ನಡೆಯುತ್ತಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ಆದೇಶ ಪ್ರತಿ ನೀಡದ ಸರ್ಕಾರದ ವಿರುದ್ಧ ಅಭ್ಯರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. 2022ರ ಮೇ ನಲ್ಲಿ 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬರೆದಿದ್ದ 70 ಸಾವಿರ ಅಭ್ಯರ್ಥಿಗಳಲ್ಲಿ 13,352 ಜನ ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಆ ಪೈಕಿ ನೇಮಕಾತಿಯಲ್ಲಿ ಕಾನೂನು ಗೊಂದಲದವಿದೆ ಎಂದು ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೇ ಕಾರಣದಿಂದಾಗಿ ಯಾವುದೇ ಕಾನೂನು ತೊಡಕಿಲ್ಲದೇ ಆಯ್ಕೆಯಾದ ಅಭ್ಯರ್ಥಿಗಳಿಗೂ ಸಮಸ್ಯೆಯಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ ದಾಖಲಾತಿಗಳನ್ನು ಪಡೆದಿರುವ ಸರ್ಕಾರ, ಆದೇಶ ಪ್ರತಿ ನೀಡುತ್ತಿಲ್ಲ ಎಂದು ಅಭ್ಯರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಮಳೆಯ ಅಭಾವವಾಗಿರುವುದರಿಂದ ರಾಜ್ಯದಲ್ಲಿ ಬರಗಾಲ ಎಂದು ಘೋಷಿಸುವ ಮೂಲಕ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡೆಸುತ್ತಿವೆ.