ಮೈಸೂರು:ಅರಮನೆಯಲ್ಲಿ ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ 3 ದಿನಗಳ ಕಾಲ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ತಿಳಿಸಿದೆ.
ಇದೇ ತಿಂಗಳ 24 ರಂದು ದಸರಾ ಮಹೋತ್ಸವದ ಪ್ರಮುಖವಾದ ಖಾಸಗಿ ದರ್ಬಾರ್ ಪ್ರಯುಕ್ತ ರತ್ನ ಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಸಲಾಗುತ್ತದೆ. ರಾಜಮನೆತನದ ಪ್ರಮುಖ ಧಾರ್ಮಿಕ ಕಾರ್ಯ ಇದಾಗಿದ್ದು ಸೆ.29 ರಿಂದ ಅಕ್ಟೋಬರ್ 7ರ ವರೆಗೆ ಪ್ರತಿದಿನ ಸಂಜೆ ಅರಮನೆಯ ಆವರಣದಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಹೀಗಾಗಿ 24ರ ಬೆಳಿಗ್ಗೆ 10 ಗಂಟೆಯಿಂದ 1ರ ವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಅಂದು ಬೆಳಗ್ಗೆ ವಿವಿಧ ರೀತಿಯ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಹೋಮ ಹವನಗಳು ನಡೆದ ನಂತರವೇ ರತ್ನಖಚಿತ ಸಿಂಹಾಸನ ಬಿಡಿಭಾಗಗಳಿರುವ ಸ್ಟ್ರಾಂಗ್ ರೂಂ ತೆರೆಯಲಾಗುತ್ತದೆ.ಹಾಸನ ಜೋಡಣೆಯಲ್ಲಿ ಪ್ರತಿಯೊಂದು ಬಿಡಿ ಭಾಗಗಳನ್ನೂ ಶಸ್ತ್ರಸಜ್ಜಿತ ಸಿಬ್ಬಂದಿಗಳೊಂದಿಗೆ ತರಲಾಗುತ್ತದೆ. ದರ್ಬಾರ್ ನಡೆಯುವ ವೇಳೆ ಸಿಬ್ಬಂದಿಗೆ ಮೊಬೈಲ್ ನಿಷೇಧ ಮಾಡಲಾಗಿದ್ದು, ಸಿಸಿಟಿವಿಗೂ ಪರದೆ ಹಾಕಲಾಗುತ್ತದೆ.
29ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2:39ರ ವರೆಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಅಯುಧಪೂಜೆ ದಿನವಾದ ಅಕ್ಟೋಬರ್ 7 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2:30 ವರೆಗೆ ಹಾಗೂ ಅ.8 ವಿಜಯದಶಮಿಯಂದು ದಿನವಿಡೀ ಅರಮನೆಗೆ ಪ್ರವಾಸಿಗರ, ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.